ಚಂದಮಾರಿ (ಕೋಚ್‌ಬೆಹಾರ್) : ದೇಶದ ಹಣವನ್ನು ಪೋಲು ಮಾಡಿ ವಿಶ್ವಗುರುವಾಗಲು ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪಂಚಾಯತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ವಿರುದ್ಧ ಸಿಎಂ ಮಮತಾ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ಪಂಚಾಯತ್ ಚುನಾವಣೆ ನಡೆಯಲಿವೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಸೋಮವಾರದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಕೂಚ್ ಬೆಹಾರ್‌ನ ಚಂದಮಾರಿ ಪ್ರಾಣನಾಥ್ ಪ್ರೌಢಶಾಲೆಯ ಮೈದಾನದಲ್ಲಿ ಸಾರ್ವಜನಿಕ ಸಭೆಯ ಮೂಲಕ ಅವರು ತಮ್ಮ ಪ್ರಚಾರವನ್ನು ಪ್ರಾರಂಭಿಸಿದರು. ಸಾರ್ವಜನಿಕ ಸಭೆಯ ವೇದಿಕೆಯಿಂದಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕೇಂದ್ರದ ಯೋಜನೆಗಳಿಗೆ ಬಿಜೆಪಿ ಹಣ ತಡೆಹಿಡಿದಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್, ಸಿಪಿಐ (ಎಂ) ಪಕ್ಷಗಳು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿವೆ ಎಂದೂ ಅವರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ವಿಷಯ ಪ್ರಸ್ತಾಪಿಸಿದ ಅವರು, ಮೋದಿ ಸರ್ಕಾರದ ಹಣ ಪಾವತಿಸಲು ಅಮೆರಿಕಕ್ಕೆ ಹೋದರು, ಹಣ ಕಳೆದುಕೊಂಡರು ಮತ್ತು 24 ಸಾವಿರ ಯುಎಸ್ ಡಾಲರ್ ಅಥವಾ ಬಿಲಿಯನ್ ಡಾಲರ್ಗಳನ್ನು ವ್ಯರ್ಥ ಮಾಡಿದರು ಮತ್ತು ಅವರನ್ನು ತೃಪ್ತಿಪಡಿಸಲು ಅಮೆರಿಕಕ್ಕೆ ಹೋದರು, ಮೋದಿ ಬಾಬು ನಾಯಕರಾಗಲು ಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ (ಮಹಾಜೋತ್) ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ (ಎಂ) ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ ಸಂಬಂಧವನ್ನು ಮುರಿಯುತ್ತೇನೆ ಎಂದು ಮಮತಾ ಹೇಳಿದರು.