ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರೂಪಿಸಿಕೊಂಡಿರುವ I.N.D.I.A ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು, ಅಲ್ಲಿನ ನಾಯಕರ ನಡೆಗಳಿಂದ ವಿಧಿತವಾಗುತ್ತಿದೆ. ಡಿಸೆಂಬರ್ 6 ರಂದು ದಿಲ್ಲಿಯಲ್ಲಿ ಕರೆಯಲಾಗಿರುವ ಸಭೆಗೆ ಕೂಟದ ಪ್ರಮುಖ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬರುವುದಿಲ್ಲ ಎಂದು ತಿಳಿಸಿದ್ದರೆ, ಇದೀಗ ಬಿಹಾರ ಸಿಎಂ ನಿತೀಶ್ಕುಮಾರ್ ಕೂಡ ಅಂದಿನ ಸಭೆಗೆ ಭಾಗವಹಿಸುತ್ತಿಲ್ಲ. ಇದು ಮೈತ್ರಿಯಲ್ಲಿ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಮೂಡಿಸಿದೆ.
ಪಂಚರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಸಭೆ ಮತ್ತು ರ‍್ಯಾಲಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸೋಲು ಕಂಡು ತೆಲಂಗಾಣದಲ್ಲಿ ಗೆಲುವಿನ ನಗೆ ಬೀರಿದೆ. ಉತ್ತರ ಭಾರತದಲ್ಲಿ ಕಾಂಗ್ರೆಸ್ಗೆ ನೆಲೆ ಇಲ್ಲವಾಗುತ್ತಿರುವುದು, ಕೂಟದ ಇತರ ಪಕ್ಷಗಳಿಂದ ನಗೆಪಾಟಲಿಗೀಡಾಗಿದೆ.
ನಿತೀಶ್ ಗೈರು ಸಾಧ್ಯತೆ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಡಿಸೆಂಬರ್ 6 ರಂದು ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಕೂಟದ ಸಭೆಗೆ ಗೈರಾಗುವ ಸಾಧ್ಯತೆಯಿದೆ. ಇವರ ಬದಲಿಗೆ ಜೆಡಿಯು ಮುಖ್ಯಸ್ಥ ಲಾಲನ್ ಸಿಂಗ್ ಮತ್ತು ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಝಾ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೂರ್ವ ನಿಯೋಜಿತ ಕಾರ್ಯಕ್ರಮಗಳಿರುವ ಕಾರಣ ತಾವು ಅಂದಿನ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಟೀಕೆ:ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡಿರುವುದು ಇಂಡಿಯಾ ಕೂಟದ ಮಿತ್ರ ಪಕ್ಷಗಳಿಂದಲೇ ಟೀಕೆಗೆ ಗುರಿಯಾಗಿದೆ. ಚುನಾವಣೆಗೂ ಮೊದಲು ಸೀಟು ಹಂಚಿಕೆಯಲ್ಲಿ ರಾಜಿಯಾಗಿದ್ದರೆ, ಇಷ್ಟು ಪ್ರಮಾಣದಲ್ಲಿ ಸೋಲು ಕಾಣುತ್ತಿರಲಿಲ್ಲ ಎಂದು ನಾಯಕರು ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರು, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು ಅದರ ವೈಫಲ್ಯದಿಂದಾಗಿಯೇ ಹೊರತು, ಜನರಿಂದಲ್ಲ. ಚುನಾವಣೆಗೂ ಮುನ್ನ ಸೀಟು ಹಂಚಿಕೆ ಮಾಡಿಕೊಂಡಿದ್ದರೆ, ಈ ಗತಿ ಬರುತ್ತಿರಲಿಲ್ಲ. ಮತ ವಿಭಜನೆಯಿಂದಾಗಿಯೇ ಕಾಂಗ್ರೆಸ್ ಸೋಲು ಕಂಡಿದೆ. ಮೈತ್ರಿಕೂಟದ ಇತರ ಪಕ್ಷಗಳು ಕಾಂಗ್ರೆಸ್ನ ವೋಟು ಕಸಿದುಕೊಂಡಿವೆ ಎಂದು ಅವರು ಹೇಳಿದ್ದಾರೆ.
ಇದರ ಎಸ್ಪಿ ನಾಯಕ ಅಖಿಲೇಶ್ ಯಾದವ್ ಮಾತನಾಡಿ, ಮಧ್ಯಪ್ರದೇಶದಲ್ಲಿ ಕೆಲ ಸೀಟು ಹಂಚಿಕೆ ಬಗ್ಗೆ ಎಸ್ಪಿ ಪ್ರಸ್ತಾಪ ಮಾಡಿತ್ತು. ಆದರೆ, ಕಾಂಗ್ರೆಸ್ ನಿರಾಕರಿಸಿತ್ತು. ಇದು ಫಲಿತಾಂಶದ ಮೇಲೆ ಪರಿಣಾಮ ಬಿದ್ದಿತು. ಕಾಂಗ್ರೆಸ್ ನಾಯಕರ ತಪ್ಪು ನಡೆಗಳಿಂದಾಗಿಯೇ ಇಂದಿನ ಫಲಿತಾಂಶಕ್ಕೆ ಕಾರಣ. ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳು ಬಲ ಹೊಂದಿವೆಯೋ, ಅಲ್ಲಿ ಬಿಜೆಪಿಯ ಜೊತೆಗೆ ನೇರ ಹೋರಾಟ ನಡೆಸಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ನೆರವಿನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇತ್ತ ಬಿಹಾರದ ಜೆಡಿಯು ನಾಯಕರು, ಸಿಎಂ ನಿತೀಶ್ಕುಮಾರ್ ಪರ ಬ್ಯಾಟಿಂಗ್ ಬೀಸಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ನಿತೀಶ್ಕುಮಾರ್ ಅವರಂತಹ ನಾಯಕರ ನೇತೃತ್ವದ ಅಗತ್ಯವಿದೆ. ಸಂಘಟನೆಗೆ ಇನ್ನಷ್ಟು ಬಲ ತುಂಬಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಕೂಡ ಕೂಟದಲ್ಲಿ ಕಾಂಗ್ರೆಸ್ನ ಪ್ರಭಾವ ಕಡಿಮೆ ಮಾಡುವ ದೂರದೃಷ್ಟಿ ಹೊಂದಿದೆ.
ಇದನ್ನೂ ಓದಿ:ಡಿ.6 ರಂದು I.N.D.I.A ಮೈತ್ರಿಕೂಟದ ಸಭೆ ಕರೆದ ಕಾಂಗ್ರೆಸ್