ನವದೆಹಲಿ:ಬಂಗಾಳದಲ್ಲಿ ಚಂಡಮಾರುತದ ನಂತರದ ಪರಿಸ್ಥಿತಿ ಕುರಿತು ಮೋದಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಹಾಜರಾಗದೇ ಸಿಎಂ ಮಮತಾ ಬ್ಯಾನರ್ಜಿ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಅಲಪನ್ ಬಂಡೋಪಾಧ್ಯಾಯರ ಸುತ್ತಲಿನ ವಿವಾದದಲ್ಲಿ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ
ಕಳೆದ ವಾರ ಹಾನಿ ಪ್ರದೇಶಗಳ ಪರಿಶೀಲನಾ ಸಭೆಗೆ ಪ್ರಧಾನಿ ಮೋದಿ ಬಂದಿದ್ದ ವೇಳೆ ಮಮತಾ ಬ್ಯಾನರ್ಜಿ ಔಪಚಾರಿಕವಾಗಿ ಭೇಟಿ ಮಾಡಿ, ದಿಘಾಗೆ ತೆರಳಿದರು, ವೈಮಾನಿಕ ಸಮೀಕ್ಷೆ ಹಾಗೂ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಪ್ರಧಾನಿಯವರನ್ನು ಭೇಟಿ ಮಾಡಿ ಹೊರಡುವ ಮುನ್ನ ಮಮತಾ ಬ್ಯಾನರ್ಜಿ ಅವರ ಅನುಮತಿ ಪಡೆದಿದ್ದೇನೆ ಎಂದಿದ್ದಾರೆ. ಆದರೆ, ಸರ್ಕಾರಿ ಮೂಲಗಳು ಈ ಮಾಹಿತಿಯನ್ನು ತಳ್ಳಿ ಹಾಕಿವೆ. ಅಲ್ಲದೇ, ಸಭೆಗೆ ಹಾಜರಾಗದೆ ಅರ್ಧ ಗಂಟೆಗೂ ಹೆಚ್ಚು ಸಮಯ ಮೋದಿಯವರನ್ನು ಕಾಯಿಸಿದ್ದಾರೆ. ಮೊದಲಿಗೆ ಮೀಟಿಂಗ್ಗೆ ಹಾಜರಾಗುತ್ತೇನೆ ಎಂದಿದ್ದ ದೀದಿ, ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸಹ ಹಾಜರಾಗುತ್ತಾರೆ ಎಂದು ತಿಳಿದು ಸಭೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾ ಅವರನ್ನು ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿದ ನಂತರ, ಇದೊಂದು ಅಸಂವಿಧಾನಿಕ ವಿಧಾನ ಎಂದು ಸಿಎಂ ಗುಡುಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ , ಮುಖ್ಯ ಕಾರ್ಯದರ್ಶಿಯು ಅಖಿಲ ಭಾರತ ಸೇವೆಗಳ ಅಧಿಕಾರಿಯಾಗಿರುವುದರಿಂದ ಈ ಆದೇಶವು ಸಂಪೂರ್ಣವಾಗಿ ಸಾಂವಿಧಾನಿಕವಾಗಿದೆ. ಅವರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ಹಿಂದೇಟು ಹಾಕಿದ್ದಾರೆ. ಅಲ್ಲದೇ, ಬಂಗಾಳದ ಯಾವೊಬ್ಬ ಸರ್ಕಾರಿ ಅಧಿಕಾರಿಯೂ ಪ್ರಧಾನಮಂತ್ರಿ ನೇತೃತ್ವದ ಸಭೆಗೆ ಹಾಜರಾಗಿರಲಿಲ್ಲ.
ಕೇಂದ್ರದಿಂದ ರಾಜ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಸಹ ಮೀಟಿಂಗ್ನಲ್ಲಿ ಭಾಗವಹಿಸಿರಲಿಲ್ಲ. ಇದೆಲ್ಲವೂ ಮಮತಾ ಬ್ಯಾನರ್ಜಿಯವರಿಗೆ ತಿಳಿದಿದೆ. ಅಲಪನ್ ಅವರನ್ನು ಉಳಿಸುವ ಕೊನೆಯ ಪ್ರಯತ್ನವಾಗಿ ಅವರನ್ನು ಕೇಂದ್ರದ ಹುದ್ದೆಗೆ ರಾಜೀನಾಮೆ ಕೊಡಿಸಿದ್ದಾರೆ. ಅವರೊಬ್ಬ ಭಾರತೀಯ ಸೇವೆಗಳ ಅಧಿಕಾರಿಯಾಗಿರುವುದರಿಂದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.