ಕೋಲ್ಕತ್ತಾ:ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಆಪರೇಷನ್ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಭಾರತೀಯ ಚುನಾವಣಾ ಆಯೋಗ ತೆಗೆದು ಹಾಕಿದ್ದ, ವರ್ಗಾವಣೆ ಮಾಡಿದ್ದ ಅಧಿಕಾರಿಗಳನ್ನು ಪುನಃ ಕರೆಯಿಸಿಕೊಂಡಿದ್ದಾರೆ.
ಚುನಾವಣೆಗೆ ಮುಂಚಿತವಾಗಿ ಡಿಜಿ, ಎಡಿಜಿ ಸೇರಿದಂತೆ 29 ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿತ್ತು. ಇವರೆಲ್ಲರನ್ನೂ ಮಮತಾ ಬ್ಯಾನರ್ಜಿ ಮೊದಲಿದ್ದ ಸ್ಥಾನಗಳಿಗೆ ಮರಳಿ ನೇಮಿಸಿರುವುದಾಗಿ ಬಂಗಾಳ ಸರ್ಕಾರ ನಿನ್ನೆ ಸಂಜೆ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಚುನಾವಣೋತ್ತರ ಹಿಂಸೆ: ವರದಿ ಕೇಳಿ ದೀದಿ ಸರ್ಕಾರಕ್ಕೆ ಕೇಂದ್ರದ ಎಚ್ಚರಿಕೆ
ಕೂಚ್ ಬೆಹಾರ್ ಘಟನೆ ಸಂಬಂಧ ಅಲ್ಲಿನ ಎಸ್ಪಿ ದೇಬಾಶಿಶ್ ಧಾರ್ರನ್ನು ದೀದಿ ಅಮಾನತು ಮಾಡಿದ್ದಾರೆ. ರಾಜ್ಯದಲ್ಲಿ ಏ.10ರಂದು ನಾಲ್ಕನೇ ಹಂತದ ಮತದಾನ ನಡೆಯುವ ವೇಳೆ ಕೂಚ್ ಬೆಹಾರ್ ಜಿಲ್ಲೆಯ ಶೀತಲ್ಕೂಚಿ ಪ್ರದೇಶದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದರು.
ವಿಧಾನ ಕದನದಲ್ಲಿ ಬಿಜೆಪಿ ವಿರುದ್ಧ ಭಾರೀ ಗೆಲುವು ಕಂಡಿದ್ದ ಟಿಎಂಸಿ ಪಕ್ಷವು ನಂದಿಗ್ರಾಮದಲ್ಲಿ ಸೋಲುಕಂಡಿದ್ದ ಮಮತಾರನ್ನು ಶಾಸಕಾಂಗ ಪಕ್ಷದ ಮುಖಂಡೆಯಾಗಿ ಅವಿರೋಧ ಆಯ್ಕೆ ಮಾಡಿತ್ತು. ಇದರಿಂದಾಗಿ ಮಮತಾ ಬ್ಯಾನರ್ಜಿ ನಿನ್ನೆ ಮೂರನೇ ಬಾರಿಗೆ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.