ಭವಾನಿಪುರ (ಪಶ್ಚಿಮ ಬಂಗಾಳ): ಪ್ರತಿಷ್ಠೆಯ ಕದನವಾಗಿದ್ದ ಭವಾನಿಪುರ ಉಪ ಚುನಾವಣೆಯಲ್ಲಿ ಕೊನೆಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಜಯಭೇರಿ ಬಾರಿಸಿದ್ದು, ಸಿಎಂ ಸ್ಥಾನ ಉಳಿಸಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ವಿರುದ್ಧ ಬರೋಬ್ಬರಿ 56,388 ಮತಗಳ ಅಂತರದಿಂದ ದೀದಿ ಗೆಲುವು ದಾಖಲಿಸಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಪಶ್ಚಿಮ ಬಂಗಾಳದ ಭವಾನಿಪುರ, ಜಂಗೀಪುರ್, ಸಂಸರ್‌ಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 30 ರಂದು ಉಪ ಚುನಾವಣೆ ನಡೆದಿತ್ತು. ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಭವಾನಿಪುರ ಕ್ಷೇತ್ರದ ಮೇಲೆ ಎಲ್ಲರ ಕಣ್ಣಿತ್ತು. ಏಕೆಂದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಕಣಕ್ಕೆ ಇಳಿದಿದ್ದ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದರು. ಆದರೆ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದ ಹಿನ್ನೆಲೆ ಮತ್ತೆ ಮುಖ್ಯಮಂತ್ರಿಯಾಗಿ ದೀದಿ ಅಧಿಕಾರಕ್ಕೆ ಮರಳಿದ್ದರು.
ಆದರೆ ಶಾಸಕ ಸ್ಥಾನ ಪಡೆಯದೇ ಇದ್ದಿದ್ದ ಮಮತಾ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂದರೆ 6 ತಿಂಗಳ ಅವಧಿಯೊಳಗೆ ತಮ್ಮ ಸದಸ್ಯತ್ವವನ್ನು ಸಾಬೀತು ಮಾಡಬೇಕಿತ್ತು. ಇದಕ್ಕಾಗಿ ಅವರು ಖಾಲಿಯಾಗಿರುವ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಿತ್ತು. ಒಂದೊಮ್ಮೆ ಸೋತರೆ ದೀದಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು.
ಭವಾನಿಪುರ ಕ್ಷೇತ್ರದಿಂದ ಮಮತಾ ಉಪ ಚುನಾವಣೆಗೆ ನಿಂತಿದ್ದರು. ಇವರಿಗೆ ಎದುರಾಳಿಯಾಗಿ ಬಿಜೆಪಿಯು ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಹಾಗೂ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ)ವು ಶ್ರೀಜಿಬ್ ಬಿಸ್ವಾಸ್ ಅವರನ್ನು ಕಣಕ್ಕೆ ಇಳಿಸಿತ್ತು. ಇದೀಗ ಭವಾನಿಪುರ ಕ್ಷೇತ್ರದ ಬೈ ಎಲೆಕ್ಷನ್ ಫಲಿತಾಂಶ ಹೊರ ಬಂದಿದೆ. 20 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು, 56,388 ಮತಗಳ ಅಂತರದಿಂದ ಮಮತಾ ಗೆಲುವಿನ ನಗೆ ಬೀರಿದ್ದಾರೆ.