ಕೋಲ್ಕತ್ತಾ(ಪಶ್ಚಿಮ ಬಂಗಾಳ):ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದ ಮಮತಾ ಬ್ಯಾನರ್ಜಿ ತದನಂತರ ಭವಾನಿಪುರ್ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಇಂದು MLA ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಪ. ಬಂಗಾಳ ಮುಖ್ಯಮಂತ್ರಿ - ಶಾಸಕಿಯಾಗಿ ಮಮತಾ ಪ್ರಮಾಣ ವಚನ
ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಪಶ್ಚಿಮ ಬಂಗಾಳ ರಾಜ್ಯಪಾಲರಾದ ಜಗದೀಪ್ ಧಂಖರ್ ಪ್ರತಿಜ್ಞಾವಿಧಿ ಬೋಧಿಸಿದರು. ಇವರ ಜೊತೆಗೆ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಜಾಕೀರ್ ಹುಸೇನ್ ಹಾಗೂ ಅಮೀರುಲ್ ಇಸ್ಲಾ ಕೂಡ ಪ್ರಮಾಣ ವಚನ ಸ್ವೀಕಾರ ಮಾಡಿದರು. ಜಾಕೀರ್ ಹುಸೇನ್ ಜಾಂಗೀಪುರ್ ಕ್ಷೇತ್ರ ಹಾಗೂ ಅಮೀರುಲ್ ಸಮೀರ್ಗಂಜ್ ಕ್ಷೇತ್ರದಿಂದ ಗೆಲುವು ಸಾಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಮಮತಾ ಬ್ಯಾನರ್ಜಿ ತಾವು ಸ್ಪರ್ಧೆ ಮಾಡಿದ್ದ ನಂದಿಗ್ರಾಮ್ದಿಂದ ಸೋಲು ಕಂಡಿದ್ದರು. ಆದರೆ, ಪಕ್ಷ ಇವರನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಹೀಗಾಗಿ ಆರು ತಿಂಗಳೊಳಗೆ ಶಾಸಕಿಯಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು. ಪಶ್ಚಿಮ ಬಂಗಾಳ ಭವಾನಿಪುರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಮತಾ ಇದೀಗ 58 ಸಾವಿರ ವೋಟ್ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.