ಕೋಲ್ಕತ್ತಾ (ಪಶ್ಚಿಮ ಬಂಗಾಳ):ನವದೆಹಲಿಯ ಬಿಬಿಸಿ ಕಚೇರಿಯಲ್ಲಿ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳಿಂದ ನಡೆದ ದಾಳಿ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ''ಕೇಂದ್ರ ಸರ್ಕಾರದಿಂದ ನಡೆಸಿರುವ ಈ ಐಟಿ ದಾಳಿಯು ರಾಜಕೀಯ ಸೇಡಿನ ಕ್ರಮವಾಗಿ ನಾನು ನೋಡುತ್ತಿದ್ದೇನೆ'' ಎಂದು ಮಮತಾ ಬ್ಯಾನರ್ಜಿ ಬುಧವಾರ ಖಾರವಾಗಿ ಉತ್ತರಿಸಿದ್ದಾರೆ. ಬಿಜೆಪಿ ಸರ್ಕಾರ ರಾಜಕೀಯ ದ್ವೇಷದಿಂದಲೇ ಈ ರೀತಿ ಕಾರ್ಯ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರತೀಕಾರ: 2002ರ ಗುಜರಾತ್ ಹಿಂಸಾಚಾರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿತ್ತು. ಆ ಸಾಕ್ಷ್ಯಚಿತ್ರದ ಹೆಸರು 'ಭಾರತ: ಮೋದಿ ಪ್ರಶ್ನೆ'. ಈ ಸಾಕ್ಷ್ಯಚಿತ್ರ ದೇಶದ ವಿವಿಧ ಭಾಗಗಳಲ್ಲಿ ಸಂಚಲನ ಮೂಡಿಸಿತ್ತು. ಸರ್ಕಾರ ಕೂಡಾ ಈ ಸಾಕ್ಷ್ಯಚಿತ್ರವನ್ನು ನಿಷೇಧಿಸಿತ್ತು. ಆಗ ಈ ವಿವಾದ ಕೊನೆಗೊಳ್ಳಲಿಲ್ಲ. ಈ ವಿಷಯದ ಬಗ್ಗೆ ಹಲವರು ಮೋದಿ ಸರ್ಕಾರವನ್ನು ಕಟುವಾಗಿಯೇ ಟೀಕಿಸಿದ್ದರು.
ವಿರೋಧ ಪಕ್ಷಗಳಿಂದ ಅಸಮಾಧಾನ: ಈ ಪರಿಸ್ಥಿತಿಯ ಮಧ್ಯೆ ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿರುವುದನ್ನು ವಿಷಯವಾಗಿಸಿಕೊಂಡು ಸರ್ಕಾರವು ಐಟಿ ದಾಳಿ ನಡೆಸಲಾಗುದೆ ಎಂದು ಹಲವು ರಾಜಕೀಯ ನಾಯಕರು ಆರೋಪಿಸಿದ್ದಾರೆ. ಈ ರೀತಿ ಕ್ರಮ ಕೈಗೊಂಡಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪ ಮಾಡಿದಂತೆ ಆಗಿದೆ ಎಂದು ಹಲವರು ಗಂಭೀರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಕೂಡಾ ಅಸಮಾಧಾನ ವ್ಯಕ್ತಪಡಿಸಿವೆ. ಟೀಕಿಸಿವೆ. ಇದೀಗ ಮಮತಾ ಬ್ಯಾನರ್ಜಿ ಅವರು ಕೂಡಾ ಈ ವಿಚಾರ ಬಗ್ಗೆ ಧ್ವನಿ ಎತ್ತಿದ್ದಾರೆ.
ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಬಳಿಕ ಮುಖ್ಯಮಂತ್ರಿಗಳು ವಿಧಾನಸಭೆಯಿಂದ ನಿರ್ಗಮಿಸುವ ವೇಳೆ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮಮತಾ ಬ್ಯಾನರ್ಜಿ ಅವರು, ''ಅಕ್ರಮ ನಡೆದಿದ್ದರೆ, ಸರ್ಕಾರ ಅವರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು'' ಎಂದರು.
ಕೇಂದ್ರದ ವಿರುದ್ದ ಹರಿಹಾಯ್ದ ಮಮತಾ:''ನಾನು ಯಾವುದೇ ಕಾನೂನುಬಾಹಿರ ಕೃತ್ಯವನ್ನು ಬೆಂಬಲಿಸುತ್ತಿಲ್ಲ. ಬಿಬಿಸಿ ಕೆಲವು ಸರ್ಕಾರಿ ವಿರೋಧಿ ಸುದ್ದಿಗಳನ್ನು ಪ್ರಕಟಿಸಿದೆ ಎಂದು ನಾನು ನಂಬಲು ಸಾಧ್ಯವಿಲ್ಲ. ನಂತರ ಬಿಬಿಸಿ ವಿರುದ್ಧ ಅಭಿಯಾನ ಪ್ರಾರಂಭವಾಯಿತು. ಇದು ಅತ್ಯಂತ ದುರದೃಷ್ಟಕರ ಸಂಗತಿ. ರಾಜಕೀಯ ಸೇಡಿನಿಂದಲೇ ಬಿಜೆಪಿ ಸರ್ಕಾರ ಐಟಿ ದಾಳಿ ನಡೆಸುತ್ತಿರುವುದು ಸರಿಯಲ್ಲ'' ಎಂದು ಅವರು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.