ಕೋಲ್ಕತ್ತಾ(ಪಶ್ಚಿಮಬಂಗಾಳ):ನಾನು ಸಾಯಲು ಸಿದ್ಧನಿದ್ದೇನೆ ಆದರೆ, ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ನಡೆಸಲು ಮಾತ್ರ ಬಿಡುವುದಿಲ್ಲ. ದೇಶದ ಸಂವಿಧಾನವನ್ನು ಬದಲಿಸುವ, ವಿಭಜಿಸಲು ದ್ವೇಷದ ರಾಜಕಾರಣವನ್ನು ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಈದ್ ಉಲ್ ಫಿತರ್ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಜಾನ್ ಹಬ್ಬದ ಶುಭ ಕೋರಿದರು. ಬಳಿಕ ಬಿಜೆಪಿಯ ವಿರುದ್ಧ ಹರಿಹಾಯ್ದು, ಟಿಎಂಸಿ ಸರ್ಕಾರವನ್ನು ಕೆಡವಲು ಕೇಸರಿ ಪಡೆ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ, ಅದು ಎಂದಿಗೂ ಸಫಲವಾಗುವುದಿಲ್ಲ. ನಾನು ಯಾವ ಕಾರಣಕ್ಕೂ ಬಿಜೆಪಿಗರ ಜೊತೆ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಶಾಗೆ ಕರೆ ಮಾಡಿಲ್ಲ, ಸಾಬೀತಾದರೆ ರಾಜೀನಾಮೆ ನೀಡುವೆ:ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡ ಬಳಿಕ, ನಾನು ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ನೆರವು ನೀಡಲು ಕೇಳಿದ್ದಾಗಿ ರಾಜ್ಯ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಒಂದು ವೇಳೆ ಅದು ನಿಜವೆಂದು ಸಾಬೀತಾದಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡುವೆ ಎಂದು ದೀದಿ ಗುಡುಗಿದರು.
ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕೊಳಕು, ಕೆಟ್ಟ ಮತ್ತು ವಿನಾಶಕಾರಿ ರಾಜಕಾರಣಿ ಎಂದು ಟೀಕಿಸಿದ ದೀದಿ, ಸರ್ಕಾರವನ್ನು ಬಲವಂತವಾಗಿ ಉರುಳಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದೆ. ಅದರಿಂದ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ನಿರ್ಧಾರದ ಬಳಿಕ ಅಮಿತ್ ಶಾಗೆ ನಾಲ್ಕು ಬಾರಿ ಕರೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರು ಅದನ್ನು ಸಾಬೀತುಪಡಿಸಬೇಕು. ನಿಜವಾದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ ನೀವು ರಾಜೀನಾಮೆ ನೀಡುತ್ತೀರಾ? ಎಂದು ಪ್ರತಿ ಸವಾಲು ಹಾಕಿದರು.
ಸುಳ್ಳು ಮತ್ತು ಅಪಪ್ರಚಾರದ ರಾಜಕಾರಣ ನಡೆಯುತ್ತಿದೆ. ಬಿಜೆಪಿ ವ್ಯವಸ್ಥಿತವಾಗಿ ತೃಣಮೂಲದ ಬಗ್ಗೆ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಹೇಳಿದರು.
ಸುವೇಂದು ಅಧಿಕಾರಿ ಆರೋಪವೇನು?:ತೃಣಮೂಲ ಕಾಂಗ್ರೆಸ್ ಅನ್ನು ರಾಷ್ಟ್ರೀಯ ಪಕ್ಷಗಳ ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟ ಬಳಿಕ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿದ್ದರೆ. ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಸ್ಥಾನಮಾನವನ್ನು ಹಿಂಪಡೆಯುವ ನಿರ್ಧಾರವನ್ನು ಆಯೋಗವು ಘೋಷಿಸಿದೆ. 2024ರ ಲೋಕಸಭೆ ಚುನಾವಣೆವರೆಗೂ ಪಕ್ಷದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಉಳಿಸಿಕೊಡುವಂತೆ ಕೋರಿದ್ದಾರೆ. ಆದರೆ, ಗೃಹ ಸಚಿವರು, ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರ ನಿರ್ಧಾರವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ಕಾರ್ಯಕ್ರಮವೊಂದರಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದರು.
ಇದನ್ನೂ ಓದಿ:ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟ ಆಯೋಗ: 72.30 ಲಕ್ಷ ನಗದು, 23 ಸಾವಿರ ಲೀಟರ್ ಮದ್ಯ ವಶ