ಕೋಲ್ಕತ್ತಾ: ವಿದೇಶ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪೇನ್ ನೆಲದಲ್ಲಿ ಪಿಯಾನೋದಲ್ಲಿ ರವೀಂದ್ರ ಸಂಗೀತದ ಹಾಡು ನುಡಿಸುವ ಮೂಲಕ ಕುತೂಹಲ ಮೂಡಿಸಿದರು. ಸಂಗೀತ ವಾದ್ಯ ವಾದಕಿ ಎಂದು ಗುರುತಿಸಿಕೊಂಡಿರುವ ಮಮತಾ ಬ್ಯಾನರ್ಜಿ ಶುಕ್ರವಾರ ಮ್ಯಾಡ್ರಿಡ್ನಲ್ಲಿ ಠಾಗೋರರ ಪ್ರಸಿದ್ಧ ಹಾಡು 'ಫುಲೆ ಫುಲೆ ಢೋಲೆ ಢೋಲೆ' ಹಾಡನ್ನು ಪಿಯಾನೋದಲ್ಲಿ ನುಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹೂಡಿಕೆಯ ಅಭಿವೃದ್ಧಿಗಾಗಿ ದುಬೈ ಹಾಗೂ ಸ್ಪೇನ್ ದೇಶಗಳಿಗೆ 12 ದಿನಗಳ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ, ಸ್ಪೇನ್ನ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆಗೆ ಸ್ಪೇನ್ನಲ್ಲಿ ಲಾ ಲಿಗಾ ಅಧಿಕಾರಿಗಳನ್ನು ಭೇಟಿ ಮಾಡಿರುವ ಬ್ಯಾನರ್ಜಿ, ಲಾ ಲಿಗಾದೊಂದಿಗೆ ಎಂಒಯುಗೆ ಸಹಿ ಹಾಕಿದರು. ಈ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಬ್ಯಾನರ್ಜಿ ಅವರು ಪಿಯಾನೋದಲ್ಲಿ ರವೀಂದ್ರ ಸಂಗೀತ ನುಡಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸ್ಪೇನ್ನಲ್ಲಿ ಬೆಳಗ್ಗಿನ ವಾಕ್ನಲ್ಲಿದ್ದಾಗ ಬೀದಿಯಲ್ಲಿದ್ದ ಸಂಗೀತಗಾರರಿಂದ ಅಕಾರ್ಡಿಯನ್ (Accordion) ತೆಗೆದುಕೊಂಡು 'ಹಮ್ ಹೋಂಗೆ ಕಾಮ್ಯಾಬ್' ಎನ್ನುವ ದೇಶಭಕ್ತಿ ಗೀತೆ ನುಡಿಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಮತಾ ಬ್ಯಾನರ್ಜಿ ಹಂಚಿಕೊಂಡಿದ್ದರು. ವಿಡಿಯೋ ಜೊತೆಗೆ, "ಸಂಗೀತ ಯಾವತ್ತೂ ಶಾಶ್ವತ. ಸಂಗೀತದ ಜೊತೆಗೇ ಬೆಳೆಯಬೇಕು, ಪ್ರಬುದ್ಧವಾಗಿರಬೇಕು. ನೀವು ಸಾಯುವವರೆಗೂ ನಿಮ್ಮ ಜೊತೆಗೇ ಸಂಗೀತ ಇರಬೇಕು" ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದರು.