ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮಮತಾ ಅವರ ದೆಹಲಿ ಭೇಟಿಯ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಸೋಮವಾರ ಕೋಲ್ಕತ್ತಾದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಮಮತಾ ಬ್ಯಾನರ್ಜಿ ಬಿಎಸ್‌ಎಫ್ ಸಮಸ್ಯೆ ಮತ್ತು ಬಂಗಾಳದ ಇತರ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದ್ದರು.
ನ. 29 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಕೆಲವು ದಿನಗಳ ಮುಂಚಿತವಾಗಿ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೇ 28ರಂದು ಪಶ್ಚಿಮ ಬಂಗಾಳದ ಕಲೈಕುಂಡಾ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಮೋದಿಯ ಅವರನ್ನು ಮಮತಾ ಕೆಲವು ನಿಮಿಷಗಳ ಕಾಲ ಭೇಟಿ ಮಾಡಿದ್ದರು.
ಚಂಡಮಾರುತದಿಂದ ಸಂಭವಿಸಿದ ಹಾನಿ ಕುರಿತು ಪರಿಶೀಲನೆಗೆ ಪ್ರಧಾನಿಯವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಉಭಯ ನಾಯಕರೂ ಭೇಟಿಯಾಗಿದ್ದರು. ಆದರೆ, ಬಳಿಕ ಪ್ರಧಾನಿಯವರು ನಡೆಸಿದ ಸಭೆಗೆ ಮಮತಾ ಹಾಜರಾಗಿರಲಿಲ್ಲ. ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಪ್ರಧಾನಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.