ಮುಂಬೈ:ರಾಷ್ಟ್ರಪತಿ ಚುನಾವಣೆ ಕುರಿತಂತೆ ಚರ್ಚಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೂನ್ 15 ರಂದು ದೆಹಲಿಯಲ್ಲಿ ವಿರೋಧ ಪಕ್ಷಗಳ ಮುಖಂಡರು ಹಾಗೂ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಈ ಸಭೆಗೆ ಬರುವಂತೆ ಆಹ್ವಾನಿಸಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೂ ಮಮತಾ ದೀದಿ ಪತ್ರ ಬರೆದಿದ್ದು, ಸದ್ಯದ ಸ್ಥಿತಿಯಲ್ಲಿ ಸಿಎಂ ಠಾಕ್ರೆ ರಾಜಕೀಯವಾಗಿ ಇಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಗಳಿವೆ. ಆದಾಗ್ಯೂ ಈ ಇಕ್ಕಟ್ಟು ಬೇಗನೆ ನಿವಾರಣೆ ಆಗಬಹುದು ಅಥವಾ ಆಗದಿರಬಹುದು.
ಪ್ರತಿಪಕ್ಷದಲ್ಲಿಯೇ ಎರಡು ಗುಂಪು: ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜೂನ್ 15 ರಂದು ಕಾಂಗ್ರೆಸ್ ಪಕ್ಷ ಹಾಗೂ ಮಮತಾ ದೀದಿ ಇಬ್ಬರೂ ಪ್ರತ್ಯೇಕವಾಗಿ ಪ್ರತಿಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ. ಈಗ ಮಹಾರಾಷ್ಟ್ರ ಸರ್ಕಾರದಲ್ಲಿ ಕಾಂಗ್ರೆಸ್ ಪ್ರಮುಖ ಪಾಲುದಾರ ಪಕ್ಷವಾಗಿದೆ. ಆದರೆ ಸಿಎಂ ಉದ್ಧವ್ ಠಾಕ್ರೆ ಮಮತಾ ಬ್ಯಾನರ್ಜಿ ಅವರೊಂದಿಗೂ ಉತ್ತಮ ರಾಜಕೀಯ ಸಂಬಂಧ ಹೊಂದಿದ್ದಾರೆ. ಹೀಗಿರುವಾಗ ಅವರು ಎರಡರಲ್ಲಿ ಯಾವ ಸಭೆಗೆ ಹೋಗುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇನ್ನೊಂದು ಸಾಧ್ಯತೆಯ ಪ್ರಕಾರ ಅವರು ಎರಡೂ ಸಭೆಗಳಿಗೆ ಹಾಜರಾಗುವರಾ ಎಂಬ ಪ್ರಶ್ನೆಯೂ ಮೂಡಿದೆ. ಹೀಗಾಗಿ ಈಗಿನ ಸ್ಥಿತಿಯಲ್ಲಿ ಸಿಎಂ ಉದ್ಧವ್ ಠಾಕ್ರೆ ಈ ರಾಜಕೀಯ ಇಕ್ಕಟ್ಟಿನಿಂದ ಹೇಗೆ ಪಾರಾಗುವರು ಎಂದು ಕಾದು ನೋಡಬೇಕಿದೆ.