ಕೋಲ್ಕತ್ತಾ:ನಿನ್ನೆ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆ ಕ್ರೂರವಾಗಿತ್ತು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲೆಂದೇ ಬಿಜೆಪಿ ಇದನ್ನು ನಡೆಸಿತ್ತು. ಪೊಲೀಸರು ಗರಿಷ್ಠ ಸಂಯಮದಿಂದ ಇದನ್ನು ತಡೆದಿದ್ದಾರೆ. ಇಲ್ಲವಾದಲ್ಲಿ ಇದು ಗುಂಡು ಹಾರಿಸಿ ತಡೆಯಬೇಕಾಗಿದ್ದ ಪ್ರತಿಭಟನೆಯಾಗಿತ್ತು ಎಂದು ಪೊಲೀಸರ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಮರ್ಥಿಸಿಕೊಂಡಿದ್ದಾರೆ.
ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರತಿಭಟನೆಯ ಬಗ್ಗೆ ನಡೆದ ಚರ್ಚೆಯ ವೇಳೆ ಮಮತಾ ಅವರು ಮಾತನಾಡಿದರು. ಬಿಜೆಪಿಯ ಪ್ರತಿಭಟನೆ ಅಶಾಂತಿಗಾಗಿ ನಡೆಸಲಾಗಿದೆ. ಕೇಸರಿ ಪಕ್ಷ ಹೊರಗಿನಿಂದ ರೈಲುಗಳಲ್ಲಿ ಬಾಂಬ್, ಶಸ್ತ್ರಸಜ್ಜಿತ ಗೂಂಡಾಗಳನ್ನು ಕರೆಸಿಕೊಂಡಿತ್ತು. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಅನೇಕ ಪೊಲೀಸ್ ಸಿಬ್ಬಂದಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯನ್ನು ತಡೆಯಲು ಪೊಲೀಸರು ಗುಂಡು ಹಾರಿಸಬಹುದಿತ್ತು. ಆದರೆ, ನಮ್ಮ ಪೊಲೀಸರು ಗರಿಷ್ಠ ಸಂಯಮವನ್ನು ಮೆರೆದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಖಾಕಿ ಪಡೆಗೆ ಶಹಬ್ಬಾಸ್ ಹೇಳಿದರು.