ನವದೆಹಲಿ:ಮುಂಬರುವ ಪಂಚರಾಜ್ಯಗಳ ವಿಧಾನಸಭೆ, ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು ನಡೆಸುತ್ತಿರುವ ಕಾಂಗ್ರೆಸ್, ಪಕ್ಷದ ಅತ್ಯುನ್ನತ ನೀತಿ ನಿರ್ಧಾರಗಳ ಸಮಿತಿಯಾದ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಭರ್ಜರಿ ಸರ್ಜರಿ ಮಾಡಿದೆ. ರಾಜ್ಯದವರಾದ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರಿಗೆ ಸ್ಥಾನ ನೀಡಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ಪುನರ್ ರಚಿಸಿ ಆದೇಶಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜಾಗುತ್ತಿರುವ ಕಾರಣ ರಣತಂತ್ರದ ಭಾಗವಾಗಿ 39 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.
ಶಶಿ ತರೂರ್, ಆನಂದ್ ಶರ್ಮಾಗೆ ಸ್ಥಾನ:ಇತ್ತ ರಾಷ್ಟ್ರೀಯವಾಗಿ ಗಮನ ಸೆಳೆದಿರುವ ಪಕ್ಷದ ಸಂಸದ ಶಶಿ ತರೂರ್ ಮತ್ತು ಆನಂದ್ ಶರ್ಮಾ ಅವರನ್ನು ಹೊಸ ಸಿಡಬ್ಲ್ಯೂಸಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಕರ್ನಾಟಕದವರಾದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್ ಮತ್ತು ಮನೀಶ್ ತಿವಾರಿ ಅವರಿಗೆ ಖಾಯಂ ಆಹ್ವಾನಿತ ಸದಸ್ಯ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ಸಮಿತಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಪಂಜಾಬ್‌ನ ಮಾಜಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ 39 ಸದಸ್ಯರುಳ್ಳ ಸಮಿತಿಯನ್ನು ರಚಿಸಲಾಗಿದೆ.