ನವದೆಹಲಿ: ದೆಹಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಅಧಿಕೃತವಾಗಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 24 ವರ್ಷಗಳ ಬಳಿಕ ಗಾಂಧಿಯೇತರ ಕುಟುಂಬದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ನಿದ್ದೆ ಮಾಡ್ತಿದೆ:ಎಐಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನವ ಭಾರತದಲ್ಲಿ ಹಸಿವು, ಮಾಲಿನ್ಯ ಹೆಚ್ಚುತ್ತಿದೆ. ಆದರೆ ರೂಪಾಯಿ ಮೌಲ್ಯವೂ ಕುಸಿಯುತ್ತಲೇ ಸಾಗಿದೆ. ಇನ್ನೊಂದು ಕಡೆ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಐ, ಇಡಿ ಮತ್ತು ಐಟಿ 24 ಗಂಟೆ ಕೆಲಸ ಮಾಡುತ್ತಿವೆ. ಹೊಸ ಭಾರತದಲ್ಲಿ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯಲಾಗುತ್ತಿದೆ ಮತ್ತು ಮಹಾತ್ಮ ಗಾಂಧಿಯನ್ನು ದೇಶವಿರೋಧಿ ಎಂದು ಕರೆಯಲಾಗುತ್ತಿದೆ ಎಂದು ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಆರೆಸ್ಸೆಸ್ ಸಂವಿಧಾನವನ್ನು ದೇಶದಲ್ಲಿ ತರಲು ಬಿಜೆಪಿ ಬಯಸುತ್ತಿದೆ ಎಂದೂ ನೂತನ ಕಾಂಗ್ರೆಸ್ ಅಧ್ಯಕ್ಷರು ಹರಿಹಾಯ್ದರು.
ನವ ಭಾರತ ಮಾಡಲು ಕಾಂಗ್ರೆಸ್ ಮುಕ್ತ ಭಾರತ ಬೇಕು ಎಂದು ಬಿಜೆಪಿ ಹೋರಾಟ ಮಾಡ್ತಿದೆ. ಆದರೆ, ಅದಕ್ಕೆ ಇರುವವರೆಗೂ ಕಾಂಗ್ರೆಸ್ ಮುಗಿಸಲು ಸಾಧ್ಯವಾಗಿಲ್ಲ. ಅದು ಸಾಧ್ಯವೂ ಇಲ್ಲ. ಹಾಗಾಗಲು ನಾವು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಖರ್ಗೆ ಪದಗ್ರಹಣ ಮಾಡಿದ ಬಳಿಕ ಮಾಡಿದ ಭಾಷಣದಲ್ಲಿ ಘೋಷಿಸಿದರು.