ನವದೆಹಲಿ:ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆ ವಿರೋಧಿಸಿ, ದೇಶದ ಅನ್ನದಾತರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ಮಾಡಿದ್ದು, ಈ ವೇಳೆ 700ಕ್ಕೂ ಅಧಿಕ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿ ಸಿಕ್ಕಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಸಾವಿನ ಬಗ್ಗೆ ಸರ್ಕಾರದ ಬಳಿ ಯಾವುದೇ ರೀತಿಯ ದಾಖಲೆಗಳಿಲ್ಲ ಎಂದಿದ್ದಾರೆ.
ಕೇಂದ್ರ ಸಚಿವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದು ರೈತರಿಗೆ ಮಾಡಿರುವ ಅವಮಾನ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ 700ಕ್ಕೂ ಅಧಿಕ ಅನ್ನದಾತರು ತಮ್ಮ ಪ್ರಾಣ ಕಳೆದುಕೊಂಡಿದದಾರೆ. ತಮ್ಮ ಬಳಿ ಯಾವುದೇ ರೀತಿಯ ದಾಖಲಾತಿ ಇಲ್ಲ ಎಂದು ಕೇಂದ್ರ ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಬಳಿ ಸಾವನ್ನಪ್ಪಿರುವ 700 ರೈತರ ಮಾಹಿತಿ ಇಲ್ಲ ಎಂದರೆ, ಕೋವಿಡ್ ಕಾಲದಲ್ಲಿ ಸಾವನ್ನಪ್ಪಿರುವ ಲಕ್ಷ ಲಕ್ಷ ರೋಗಿಗಳ ಮಾಹಿತಿ ಕಲೆ ಹಾಕಲು ಹೇಗೆ ಸಾಧ್ಯ? ಮಹಾಮಾರಿ ಸಂದರ್ಭದಲ್ಲಿ ಕಳೆದ ಎರಡು ವರ್ಷದಲ್ಲಿ 50 ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕೇಂದ್ರದ ಲೆಕ್ಕಾಚಾರದ ಪ್ರಕಾರ ಕೇವಲ 4 ಲಕ್ಷ ಎಂದು ತೋರಿಸುತ್ತದೆ ಎಂದರು.