ನವದೆಹಲಿ:2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಹುರಿಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿದೆ. ಈ ನಿಟ್ಟಿನಲ್ಲಿ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ರಚಿಸಲಾಗಿದ್ದ ಎಲ್ಲಾ ಸಮಿತಿಗಳನ್ನು ಕಾಂಗ್ರೆಸ್ ನ ನೂತನ ಸಾರಥಿ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಿಸರ್ಜಿಸಿದರು.
ಗುಜರಾತ್ ಮತ್ತು ಹಿಮಾಚಲ ಫಲಿತಾಂಶಗಳ ಬಳಿಕ ಲೋಕಸಭೆಗೆ ಹೆಚ್ಚು ಸಂಸದರನ್ನು ಗೆಲ್ಲಿಸಿಕೊಂಡು ಬರುವುದಕ್ಕಾಗಿ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷದ ಪುನರುಜ್ಜೀವನಕ್ಕಾಗಿ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಯೋಜನೆ ಪ್ರಕಟಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ಪ್ರಕಾರ ಸುಲಭವಾಗಿ ಗೆಲ್ಲುವ ಕ್ಷೇತ್ರ ಹಾಗೂ ಹೆಚ್ಚು ಪ್ರಬಲ ಸ್ಪರ್ಧೆ ಎದುರಿಸುವ ಕ್ಷೇತ್ರಗಳನ್ನು ಗುರುತಿಸಿ ವಿಂಗಡಿಸಲಾಗುವುದು. ಈ ಕ್ಷೇತ್ರಗಳ ಗೆಲುವಿಗೆ ಪ್ರತ್ಯೇಕ ತಂತ್ರಗಳನ್ನು ಈಗಿನಿಂದಲೇ ರೂಪಿಸಲಿದೆ. ಆರಂಭದಲ್ಲಿ ಸುಲಭವಾಗಿ ಗೆಲ್ಲುವ ಮೊದಲು ಯುಪಿ 20 ಲೋಕಸಭೆ ಸ್ಥಾನದ ಮೇಲೆ ನಿಗಾವಹಿಸಲಾಗುವುದು. ಕಾರ್ಯಕರ್ತರ ಬಲಿಷ್ಠ ಪಡೆ ರಚಿಸುವುದರೊಂದಿಗೆ, ಪಕ್ಷದ ಬಲವರ್ಧನೆಗೆ ಶ್ರಮಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.
ಸುಲಭ ಹಾಗೂ ಅತ್ಯಂತ ಪ್ರಯಾಸದ ಗೆಲುವು ಕಂಡುಬರುವ ಲೋಕಸಭೆ ಸ್ಥಾನಗಳಿಗೆ ಪ್ರತ್ಯೇಕ ಯೋಜನೆ ರೂಪಿಸಲಾಗುತ್ತಿದೆ. 2024ರ ಚುನಾವಣೆಗೆ ಈಗಿನಿಂದ ಸಿದ್ಧತೆಯಲ್ಲಿ ತೊಡಗಿದ್ದೇವೆ. ಕಾಂಗ್ರೆಸ್ ಪಕ್ಷವೂ ತನ್ನ ಬಹುದೊಡ್ಡ ಕಾರ್ಯಕರ್ತರ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಉತ್ತರಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಲೋಕಸಭೆ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಬ್ರಿಜ್ಲಾಲ್ ಖಬ್ರಿ 'ಈಟಿವಿ ಭಾರತ' ಜತೆಗೆ ಮಾತನಾಡಿದ್ದಾರೆ. "2024ರ ಚುನಾವಣೆಗೆ ಪದಾಧಿಕಾರಿಗಳ ತಂಡವನ್ನು ನೂತನ ಅಧ್ಯಕ್ಷರು ಪರಿಗಣಿಸಿ ಮರುಪರಿಶೀಲಿಸಲಿದ್ದಾರೆ" ಎಂದು ಹೇಳಿದರು.
2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 21 ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು. ಕೆಲವು ತಿಂಗಳ ನಂತರ ಉಪಚುನಾವಣೆಯಲ್ಲಿ ಮತ್ತೆ ಒಂದು ಸ್ಥಾನ ಪಡೆದುಕೊಂಡಿತು. ಆದರೆ 2014 ರಲ್ಲಿ ಎರಡು ಮತ್ತು 2019 ರಲ್ಲಿ ಕೇವಲ ಒಂದು ಸ್ಥಾನಕ್ಕೆ ಕುಸಿಯಿತು. ಪ್ರಸ್ತುತ, ಬರೇಲಿ ಕ್ಷೇತ್ರದಿಂದ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 2019 ರಲ್ಲಿ ಅಮೇಥಿ ಕ್ಷೇತ್ರದಲ್ಲಿ ಸೋಲುಂಡರು. ಕೇರಳದ ವಯನಾಡ್ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗೆ ನಿಂತಿದ್ದ ಅವರನ್ನು ಜನ ಕೈಹಿಡಿದರು.