ನವದೆಹಲಿ: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಮೇಲಿಂದ ಮೇಲೆ ಏರಿಕೆಯಾಗುತ್ತಲೇ ಇದೆ. ಈ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿರುವ ಕೈ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಇದೇ ಪ್ರಧಾನಿ ಮೋದಿಯವರ 'ಅಚ್ಛೇ ದಿನ್' ಎಂದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನ ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಖರ್ಗೆ, ನರೇಂದ್ರ ಮೋದಿ ಪ್ರಕಾರ ಅಚ್ಛೇ ದಿನ್ ಅಂದರೆ, ಅತಿಯಾದ ಹಣದುಬ್ಬರ, ಆರ್ಥಿಕತೆ ಕುಸಿತ. ಇಂತಹ ಕೆಟ್ಟ ರಾಜಕೀಯ ನಡೆಸಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ.
ಜನಸಾಮಾನ್ಯರ ಅಗತ್ಯ ವಸ್ತುಗಳಾಗಿರುವ ಎಲ್ಪಿಜಿ, ತೈಲ, ಸಿಮೆಂಟ್ ಬೆಲೆ ಏರಿಕೆ ಮಾಡಿದ್ದು ನಿಮ್ಮ ಸಾಧನೆಯಾಗಿದೆ. ಕಡಿಮೆ ಬೆಲೆಗೆ ಲಭ್ಯವಾಗಬೇಕಾಗಿದ್ದ ವಸ್ತುಗಳು ಇದೀಗ ದುಬಾರಿ ಬೆಲೆಗೆ ಲಭ್ಯವಾಗುವಂತೆ ಮಾಡಿದ್ದು, ಇವು ಸಾಮಾನ್ಯ ಜನರಿಗೆ ಲಕ್ಸುರಿಯಾಗಿ ಪರಿಣಮಿಸಿವೆ ಎಂದಿದ್ದಾರೆ.
ಇದನ್ನೂ ಓದಿರಿ: ದುಬೈನಿಂದ ಬೆಂಗಳೂರು ಏರ್ಪೋರ್ಟ್‌ಗೆ ಬಂದ ಮಹಿಳೆ ಸೂಟ್‌ಕೇಸ್‌ನಲ್ಲಿ 56 ಕೋಟಿ ಮೌಲ್ಯದ ಹೆರಾಯಿನ್!
ಈ ಹಿಂದೆ ಕೂಡ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಖರ್ಗೆ, ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಕೇಂದ್ರ ಎಡವಿದೆ ಎಂದು ಹೇಳಿದ್ದರು.