ಮುಂಬೈ (ಮಹಾರಾಷ್ಟ್ರ):ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿದೆ. ಧರ್ಮದ ಆಧಾರದ ಮೇಲೆ ಸಮಾಜವನ್ನು ಇಬ್ಭಾಗ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇಲ್ಲಿ ನಡೆದ ಕಾಂಗ್ರೆಸ್ನ 138ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು, ಮಹಿಳೆಯರು, ಎಲ್ಲ ಸಮಾಜ ಎಚ್ಚೆತ್ತುಕೊಂಡು ಒಗ್ಗೂಡಬೇಕಿದೆ. ಅಪಾಯದಲ್ಲಿರುವ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ಈ ಬಗ್ಗೆ ನಾನು ಅರಿವು ಮೂಡಿಸಲು ಬಯಸುತ್ತೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ನಾಶಪಡಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಪ್ರತ್ಯೇಕಿಸಲಾಗುತ್ತಿದೆ. ಇದರ ವಿರುದ್ಧ ಹೋರಾಡಲು ಕಾಂಗ್ರೆಸ್ಗೆ ಜನ ಬೆಂಬಲ ಬೇಕು. ನೀವು ನಮ್ಮನ್ನು ಬೆಂಬಲಿಸಿದರೆ ಅಪಾಯದಲ್ಲಿರುವ ಪ್ರಜಾಪ್ರಭುತ್ವದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಉಚಿತ ಅಕ್ಕಿ ಚುನಾವಣಾ ಗಿಮಿಕ್:ಕೇಂದ್ರ ಸರ್ಕಾರ ಈಗ ಉಚಿತ ಅಕ್ಕಿ ನೀಡುವ ಘೋಷಣೆ ಮಾಡಿದೆ. ಇದು ಚುನಾವಣಾ ಗಿಮಿಕ್ ಆಗಿದೆ. ಮುಂದಿನ ಒಂದು ವರ್ಷ ಉಚಿತವಾಗಿ ಅಕ್ಕಿ ನೀಡಲಾಗುವುದು ಎಂದು ಕೇಂದ್ರ ಹೇಳಿದೆ. ಆದರೆ, ಚುನಾವಣೆಯ ಬಳಿಕ ಅದನ್ನು ನಿಲ್ಲಿಸುತ್ತಾರೆ. ಈ ಹಿಂದೆಯೂ ಅದನ್ನೇ ಮಾಡಿದರು. ಇದೊಂದು ಸುಳ್ಳುಗಾರ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೀರ್ಘಾವಧಿಯವರೆಗೆ ಉಚಿತವಾಗಿ ಅಕ್ಕಿ ನೀಡಲಾಗಿದೆ ಎಂದು ಖರ್ಗೆ ಸಮರ್ಥಿಸಿಕೊಂಡರು.
ಭಾರತ್ ಜೋಡೋ ಯಾತ್ರೆಯು ದೇಶದಲ್ಲಿ ಅವರು (ಬಿಜೆಪಿ) ಸೃಷ್ಟಿಸುತ್ತಿರುವ ದ್ವೇಷದ ವಾತಾವರಣದ ವಿರುದ್ಧ ಹೋರಾಡುವ ಪ್ರಯತ್ನವಾಗಿದೆ. ಕೋವಿಡ್ ಕಾರಣದಿಂದಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ನಮ್ಮ ನಾಯಕ ರಾಹುಲ್ ಗಾಂಧಿಗೆ ಸೂಚನೆಯನ್ನು ಕಳುಹಿಸಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಓದಿ:ಆಹಾರ ಕಾಯ್ದೆಯಡಿ ಬಡವರಿಗೆ 1 ವರ್ಷದವರೆಗೆ ಉಚಿತ ಪಡಿತರ: ಕೇಂದ್ರದ ನಿರ್ಧಾರ