ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ ಅಧಿಕೃತ: ಸ್ಪೀಕರ್ ಒಪ್ಪಿಗೆ
19:32 February 16
ಇಂದಿನಿಂದಲೇ ರಾಜ್ಯಸಭೆ ಪ್ರತಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ್ ಖರ್ಗೆ ನೇಮಕ
ನವದೆಹಲಿ:ರಾಜ್ಯಸಭೆ ವಿಪಕ್ಷ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ರಾಜಸಭಾ ಸದಸ್ಯತ್ವದಿಂದ ನಿವೃತ್ತಿಯಾಗಿರುವ ಕಾರಣ ಅವರ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆಯಾಗಿದ್ದು, ಅದಕ್ಕೆ ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ.
ಇಂದಿನಿಂದಲೇ ರಾಜ್ಯಸಭೆ ಪ್ರತಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ್ ಖರ್ಗೆ ನೇಮಕ ಖಚಿತಗೊಂಡಿದ್ದು, ಸ್ಪೀಕರ್ ಅಂಕಿತ ಹಾಕಿದ್ದಾರೆ. ಕಾಂಗ್ರೆಸ್ ಸಲ್ಲಿಕೆ ಮಾಡಿದ್ದ ಶಿಫಾರಸ್ಸಿಗೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಸಂಸದೀಯ ಕ್ಷೇತ್ರದಿಂದ ಸೋಲು ಅನುಭವಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಿ, ರಾಜ್ಯಸಭೆ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವಧಿ ಫೆಬ್ರವರಿ 15ರಂದು ಮುಕ್ತಾಯವಾಗಿದೆ. ಈ ಸ್ಥಾನ ತುಂಬಲು ಖರ್ಗೆ ಹೆಸರನ್ನು ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಶಿಫಾರಸು ಮಾಡಲಾಗಿತ್ತು.