ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ, ರಾಜ್ಯಸಭಾ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಡಿರುವ ಖರ್ಗೆ ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಗೆ ತೆರಳಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಖರ್ಗೆ ನಾಮಪತ್ರಕ್ಕೆ ಸೂಚಕರಾಗಿ ಒಟ್ಟು 30 ಕಾಂಗ್ರೆಸ್ ನಾಯಕರು ಸಹಿ ಮಾಡಿದ್ದಾರೆ. ಪ್ರಮುಖವಾಗಿ ಎಕೆ ಆ್ಯಂಟಿನಿ, ಅಶೋಕ್ ಗೆಹ್ಲೋಟ್, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಆನಂದ ಶರ್ಮಾ, ದಿಗ್ವಿಜಯ್ ಸಿಂಗ್, ಭುಪೇಂದ್ರಸಿಂಗ್ ಹೂಡ, ಪ್ರಮೋದ್ ತಿವಾರಿ, ಪಾಲ್ ಪುನಿಯಾ, ಪವನ್ ಕುಮಾರ್ ಬನ್ಸಾಲ್ ಅವರಂತಹ ಹಿರಿಯ ನಾಯಕರು ಖರ್ಗೆ ಬೆಂಬಲಕ್ಕೆ ನಿಂತಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಖರ್ಗೆ, ಇಂದು ನನ್ನ ಬೆಂಬಲಕ್ಕೆ ಬಂದು ಎಲ್ಲ ನಾಯಕರು, ಕಾರ್ಯಕರ್ತರು, ಪ್ರತಿನಿಧಿಗಳು ಮತ್ತು ಸಚಿವರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಕ್ಟೋಬರ್ 17ರಂದು ಫಲಿತಾಂಶಗಳು ಏನೆಂದು ಮುಂದೆ ನಾವು ನೋಡೋಣ. ನಾನು ಗೆಲ್ಲುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಾಂಧಿ ನೆಹರೂ ಸಿದ್ಧಾಂತ ಪ್ರಚಾರ ಮಾಡುತ್ತಿದ್ದೆ: ಜೊತೆಗೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದ ಎಲ್ಲ ರಾಜ್ಯಗಳ ಹಿರಿಯ ನಾಯಕರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ನಾನು ಎಲ್ಲ ಪ್ರತಿನಿಧಿಗಳಲ್ಲಿ ಮನವಿ ಮಾಡುತ್ತೇನೆ. ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ. ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು 8, 9ನೇ ತರಗತಿಯಲ್ಲಿದ್ದಾಗ ಗಾಂಧಿ, ನೆಹರೂ ಸಿದ್ಧಾಂತವನ್ನೇ ಪ್ರಚಾರ ಮಾಡುತ್ತಿದ್ದೆ ಎಂದೂ ಖರ್ಗೆ ಹೇಳಿದರು.