ಹೈದರಾಬಾದ್ (ತೆಲಂಗಾಣ):ಮಾನವನ ದೇಹ ರಹಸ್ಯಗಳ ಗೂಡು. ದೇಹದಲ್ಲಿ ಕೆಲವೊಮ್ಮೆ ವಿಶೇಷತೆಗಳು ಘಟಿಸಿ ವೈದ್ಯಲೋಕಕ್ಕೇ ಅಚ್ಚರಿ ಉಂಟು ಮಾಡುತ್ತವೆ. ಅಂಥಹದ್ದೇ ಒಂದು ಅಪರೂಪದ ವಿದ್ಯಮಾನ ಬೆಳಕಿಗೆ ಬಂದಿದೆ. ಹೊಟ್ಟೆ ನೋವೆಂದು ಹೋದ ವ್ಯಕ್ತಿಗೆ ತಪಾಸಣೆಯ ವೇಳೆ ದೇಹದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಎರಡೂ ಇರುವುದು ಕಂಡುಬಂದಿದೆ. ಇದರಲ್ಲಿ ಒಂದನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಲಾಗಿದೆ.
40 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದರು. ಅವರಿಗೆ ನಡೆಸಿದ ಪರೀಕ್ಷೆಗಳಲ್ಲಿ ಈ ಅಚ್ಚರಿಯ ಸಂಗತಿ ಗೊತ್ತಾಗಿದೆ. ಈ ವ್ಯಕ್ತಿಗೆ ಮದುವೆಯಾಗಿ ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಜೊತೆಗೆ ಅವರು ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಬಂದಿದ್ದರು.
ಕಿಮ್ಸ್ ವೈದ್ಯರು ಆಲ್ಟ್ರಾಸೌಂಡ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದ್ದಾರೆ. ಆಗ ವ್ಯಕ್ತಿಗೆ ಎರಡು ಜನನಾಂಗಗಳು ಇರುವುದು ಕಂಡುಬಂದಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸೂಚಿಸಲಾಗಿದೆ. ಮಂಗಳವಾರ ಆಪರೇಷನ್ ನಡೆಸಲಾಗಿದ್ದು, ಸ್ತ್ರೀ ಜನನಾಂಗವನ್ನು ತೆಗೆದು ಹಾಕಲಾಗಿದೆ.
ವ್ಯಕ್ತಿಯಲ್ಲಿ ಶಿಶ್ನವು ಸಾಮಾನ್ಯವಾಗಿದ್ದರೂ, ವೃಷಣಗಳು ಹುಟ್ಟಿನಿಂದಲೇ ಹೊಟ್ಟೆಯಲ್ಲಿ ಉಳಿದುಕೊಂಡಿವೆ. ಜೊತೆಗೆ ಗರ್ಭಾಶಯ, ಫಾಲೋಪಿಯನ್ ಟ್ಯೂಬ್ಗಳು ಮತ್ತು ಸ್ತ್ರೀ ಜನನಾಂಗದ ಭಾಗ ಮಹಿಳೆಯರಿಗೆ ಇರುವ ಜಾಗದಲ್ಲೇ ಇದ್ದವು. ಆದರೆ, ಅವುಗಳು ಹೊಟ್ಟೆಯ ಒಳಭಾಗದಲ್ಲೇ ಇದ್ದವು. ಹೀಗಾಗಿ ಅದು ಈವರೆಗೂ ಗೊತ್ತಾಗಿರಲಿಲ್ಲ. ಲ್ಯಾಪ್ರೋಸ್ಕೋಪಿಕ್ ವಿಧಾನ ಬಳಸಿ ವೃಷಣಗಳನ್ನು ಹೊರತೆಗೆದು, ಫಾಲೋಪಿಯನ್ ಟ್ಯೂಬ್, ಗರ್ಭಕೋಶ, ಹೆಣ್ಣಿನ ಜನನಾಂಗವನ್ನು ದೇಹದಿಂದಲೇ ತೆಗೆದುಹಾಕಲಾಗಿದೆ ಎಂದು ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಮತ್ತು ರೊಬೊಟಿಕ್ ಸರ್ಜನ್ ಡಾ. ವೈ. ಎಂ. ಪ್ರಶಾಂತ್ ತಿಳಿಸಿದರು.
ಹಾರ್ಮೋನುಗಳ ಸಮಸ್ಯೆ:ಸಾಮಾನ್ಯವಾಗಿ, ಪುರುಷರು ಮತ್ತು ಮಹಿಳೆಯರು ವಿಭಿನ್ನ ಜನನಾಂಗಗಳನ್ನು ಹೊಂದಿರುತ್ತಾರೆ. ಗರ್ಭಾಶಯದಲ್ಲಿ ಭ್ರೂಣವು ರೂಪುಗೊಂಡಾಗ ಎರಡು ರೀತಿಯ ಅಂಗಗಳಿದ್ದರೂ, ನಂತರ ಹಾರ್ಮೋನುಗಳ ಪ್ರಭಾವದಿಂದ ಒಂದು ಮಾತ್ರ ಬೆಳವಣಿಗೆಯಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ಅಗತ್ಯವಿರುವ ಹಾರ್ಮೋನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗದಿದ್ದಾಗ ಪುರುಷ ಮತ್ತು ಸ್ತ್ರೀ ಅಂಗಗಳು ಏಕಕಾಲಕ್ಕೆ ಬೆಳವಣಿಗೆಯಾಗಲು ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದರು.
ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಪರ್ಸಿಸ್ಟೆಂಟ್ ಮುಲ್ಲೆರಿಯನ್ ಡಕ್ಟ್ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ. ಹೀಗೆ ಬೆಳೆದ ಜನರಲ್ಲಿ ವೃಷಣಗಳು ಹೊಟ್ಟೆಯಲ್ಲಿ ಉಳಿಯುವುದರಿಂದ ವೀರ್ಯ ಕೋಶಗಳು ಉತ್ಪತ್ತಿಯಾಗುವುದಿಲ್ಲ. ಅವರಿಗೆ ಮಕ್ಕಳು ಜನಿಸುವುದಿಲ್ಲ. ವಿಶ್ವದಾದ್ಯಂತ ಈ ರೀತಿಯ 300 ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿವೆ. ನಮ್ಮ ದೇಶದಲ್ಲಿ 20 ಕೇಸ್ ಗುರುತಿಸಲಾಗಿದೆ ಎಂದು ಡಾ. ಪ್ರಶಾಂತ್ ವಿವರಿಸಿದರು.
ಇದನ್ನೂ ಓದಿ:ನಿರ್ಮಾಣ ಹಂತದ ಸೇತುವೆ ಕುಸಿದು 17 ಮಂದಿ ಸಾವು, ಅವಶೇಷಗಳಡಿ ಇನ್ನಷ್ಟು ಕಾರ್ಮಿಕರು, ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ