ನವದೆಹಲಿ: ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾ ತುಕಡಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ನೂತನ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸೂಚಿಸಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಮುಯಿಝು ನಡುವಿನ ಭೇಟಿಯ ಸಂದರ್ಭದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಭಾರತಕ್ಕೆ ಈ ಮನವಿ ಮಾಡಿದರು ಎಂದು ಅಧ್ಯಕ್ಷರ ಕಚೇರಿ ಪ್ರಕಟಣೆಯಲ್ಲಿ ಹೇಳಿದೆ.
ದೇಶದ 8ನೇ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ 45 ವರ್ಷದ ಮುಯಿಝು, ತಮ್ಮ ನೇತೃತ್ವದ ಹೊಸ ಸರ್ಕಾರಕ್ಕೆ ಬೆಂಬಲ ನೀಡಿದ ಭಾರತ ಸೇರಿದಂತೆ ವಿಶ್ವದ 49 ರಾಷ್ಟ್ರಗಳ ಪ್ರತಿನಿಧಿಗಳಿಗೆ ಧನ್ಯವಾದ ಸಲ್ಲಿಸಿದರು. ಈ ವೇಳೆ ವಿಶ್ವ ಸಮುದಾಯದೊಂದಿಗೆ ತಮ್ಮ ದೇಶವು ಹೊಂದಿರುವ ಬಾಂಧವ್ಯ ಮತ್ತು ನೀತಿಗಳನ್ನು ಮುಂದುವರಿಸಿಕೊಂಡು ಹೋಗಲು ಬದ್ಧ ಎಂದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಪ್ರತಿನಿಧಿಯಾಗಿ ಕೇಂದ್ರ ಸಚಿವ ರಿಜಿಜು ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚೀನಾ ಬೆಂಬಲಿತ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮಾಲ್ಡೀವ್ಸ್‌ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರ ನಿಖರ ಸಂಖ್ಯೆ ತಿಳಿದಿಲ್ಲ. ನಮ್ಮ ದೇಶವು ತನ್ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಮುಂದಾಗಿದೆ. ಯಾವುದೇ ವಿದೇಶಿ ಸೇನಾ ಉಪಸ್ಥಿತಿಯಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾನು ಬದ್ಧನಾಗಿದ್ದೇನೆ ಎಂದು ಭಾರತದ ನೈಬರ್‌ಹುಡ್ ಫಸ್ಟ್ ನೀತಿಯನ್ನು ಒತ್ತಿ ಹೇಳಿದರು.
ಭಾರತೀಯ ಸೇನಾ ಸಿಬ್ಬಂದಿಯನ್ನು ತನ್ನ ದೇಶದಿಂದ ಹೊರಹಾಕುವ ಚುನಾವಣಾ ಭರವಸೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಲ್ಡೀವ್ಸ್ ಜನರು ಭಾರತಕ್ಕೆ ಈ ವಿನಂತಿ ಮಾಡಲು ಬಲವಾದ ಜನಾದೇಶ ನೀಡಿದ್ದಾರೆ. ಭಾರತವು ಮಾಲ್ಡೀವ್ಸ್ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಗೌರವಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಅಧ್ಯಕ್ಷರ ಕಚೇರಿ, "ಸಭೆಯಲ್ಲಿ ಮುಯಿಝು ಅವರು ಮಾಲ್ಡೀವ್ಸ್‌ನಿಂದ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಔಪಚಾರಿಕವಾಗಿ ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಲ್ಡೀವಿಯನ್ ನಾಗರಿಕರ ವೈದ್ಯಕೀಯ ಸ್ಥಳಾಂತರಕ್ಕೆ ಭಾರತೀಯ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳ ಕೊಡುಗೆಗಳನ್ನು ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ನೆರವು ನೀಡುವಲ್ಲಿ ಎರಡು ಹೆಲಿಕಾಪ್ಟರ್‌ಗಳ ಪ್ರಮುಖ ಪಾತ್ರವನ್ನು ಮುಯಿಝು ಒಪ್ಪಿಕೊಂಡರು" ಎಂದಿದೆ.
ಹೇಳಿಕೆಯ ಪ್ರಕಾರ, ಮುಯಿಝು ಮತ್ತು ರಿಜಿಜು ಅವರು ಭಾರತದ ಸಹಕಾರದೊಂದಿಗೆ ಮಾಲ್ಡೀವ್ಸ್‌ನಲ್ಲಿ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿದರು. 2004ರ ಸುನಾಮಿ ಮತ್ತು ಡಿಸೆಂಬರ್ 2014ರಲ್ಲಿ ನೀರಿನ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಮಾಲ್ಡೀವ್ಸ್‌ಗೆ ಸಹಾಯ ಮಾಡಿದ ಮೊದಲ ದೇಶ ಭಾರತ ಎಂಬುದು ಗಮನಾರ್ಹ.
ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಭರ್ಜರಿ ಮತ ಪಡೆದು ಮಹಮದ್ ಮುಯಿಝು ಗೆಲುವು.. ಪ್ರಧಾನಿ ಮೋದಿ ಅಭಿನಂದನೆ