ಮಾಲ್ಡಾ(ಪಶ್ಚಿಮ ಬಂಗಾಳ): ಜೂನ್ 19ರಂದು ಮಾಲ್ಡಾದಲ್ಲಿ ಭೀಕರ ಹತ್ಯೆಯೊಂದು ನಡೆದಿತ್ತು. ತನ್ನ ತಂದೆ, ತಾಯಿ, ಅಕ್ಕ ಮತ್ತು ಅಜ್ಜಿಯನ್ನು 19 ವರ್ಷದ ಯುವಕ ನಿರ್ದಯವಾಗಿ ಕೊಲೆ ಮಾಡಿದ್ದ. ಈ ಕೃತ್ಯ ಎಸಗಿದ ಬಳಿಕ ಮನೆಯ ಆವರಣದಲ್ಲೇ ಮೃತದೇಹಗಳನ್ನು ಹೂತು ಹಾಕಿದ್ದ.
ಮೇಲ್ನೋಟಕ್ಕೆ ಹಣಕ್ಕಾಗಿ ಈ ಕೊಲೆ ನಡೆದಿದೆ ಎಂದು ಊಹಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಗ್ಯಾಂಗ್‌ಸ್ಟರ್ ಆಗಬೇಕೆಂಬ ಉದ್ದೇಶದಿಂದ ತನ್ನ ಕುಟುಂಬದವರನ್ನೇ ಯುವಕ ಹತ್ಯೆ ಮಾಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕಾಲಿಯಾಚಕ್ ಪ್ರದೇಶಕ್ಕೆ ಸೇರಿದ ಆಸೀಫ್ ಅಲಿಯಾಸ್ ಮೆಹಬೂಬ್, ತನ್ನ ಕುಟುಂಬದವರನ್ನು ಕೊಂದ ಯುವಕ. ತಾನೂ ಕೊಲೆಯಾಗುವುದರಿಂದ ತಪ್ಪಿಸಿಕೊಂಡಿದ್ದ ಆಸೀಫ್ ಅಣ್ಣ ಆರೀಫ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೊಬೈಲ್ ಮತ್ತು ಲ್ಯಾಪ್ಟಾಪ್ನಲ್ಲಿ ಏನಿತ್ತು?
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಆರೋಪಿಯ ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಥ್ರಿಲ್ಲರ್ ಸಿನಿಮಾಗಳು ಮೊಬೈಲ್ ಮತ್ತು ಲ್ಯಾಪ್ಟಾಪ್ನಲ್ಲಿ ಪತ್ತೆಯಾಗಿವೆ. ಈ ರೀತಿಯ ಸಿನಿಮಾಗಳೇ ಅವನನ್ನು ಕುಟುಂಬದವರನ್ನೇ ಕೊಲೆ ಮಾಡಿಸುವಂಥ ಹೀನ ಕೃತ್ಯಕ್ಕೆ ಕೈಹಾಕುವಂತೆ ಪ್ರೇರೇಪಿಸಿವೆ ಎಂದು ಪೊಲೀಸರು ಹೇಳುತ್ತಾರೆ.
ಕೊಲೆ ಪ್ರಕರಣದ ಮುಖ್ಯ ಆರೋಪಿ ಆಸೀಫ್ ಅಲಿಯಾಸ್ ಮೆಹಬೂಬ್ ಮತ್ತು ಇನ್ನೊಬ್ಬ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಿರುವುದು. ಈ ಪ್ರಕರಣದ ಮುಖ್ಯ ಸಾಕ್ಷಿಯಾಗಿ ಆಸೀಫ್ ಅಣ್ಣನಾದ ಆರೀಫ್ನನ್ನು ಬಳಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಆರೀಫ್ನನ್ನು ಕೋರ್ಟ್ಗೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಗ್ಯಾಂಗ್ ಕಟ್ಟಿಕೊಂಡಿದ್ದ ಮಿನಿ ಗ್ಯಾಂಗ್‌ಸ್ಟರ್
ಸಿನಿಮಾಗಳನ್ನು ನೋಡಿದ ಮಾತ್ರಕ್ಕೆ ವ್ಯಕ್ತಿ ಗ್ಯಾಂಗ್‌ಸ್ಟರ್ ಆಗುವನೇ? ಆದರೆ ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿಯ ವಿಚಾರಗಳು ಗೊತ್ತಾಗಿವೆ. ಆಸೀಫ್ ಸ್ನೇಹಿತರ ಮನೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಹಲವಾರು ರೀತಿಯ ಶಸ್ತ್ರಾಸ್ತ್ರಗಳೂ ಪತ್ತೆಯಾಗಿವೆ.
ಸ್ನೇಹಿತರಾದ ಸಬೀರ್ ಅಲಿ, ಮೊಹಮದ್ ಮಫುಜ್ ಅವರ ಮನೆಗಳಲ್ಲಿ ಐದು ಆಟೋಮ್ಯಾಟಿಕ್ 7ಎಂಎಂ ಪಿಸ್ತೂಲ್ಗಳು, 10 ಮ್ಯಾಗಝೀನ್ಗಳು, 80 ಗುಂಡುಗಳು ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಆಸೀಫ್ ಈ ಶಸ್ತ್ರಾಸ್ತ್ರಗಳನ್ನು ಪ್ಯಾಕ್ ಮಾಡಿ ಕೊಟ್ಟಿದ್ದನು.
ಇದನ್ನೂ ಓದಿ:ಮುಂಬರುವ ವರ್ಷಗಳಲ್ಲಿ ಭಾರತೀಯ ನೌಕಾಪಡೆ ವಿಶ್ವದ ಅಗ್ರ ಮೂರು ನೌಕಾಪಡೆಗಳಲ್ಲಿ ಒಂದಾಗಲಿದೆ - ರಾಜನಾಥ್ ಸಿಂಗ್
ಆ ಪಾರ್ಸೆಲ್ಗಳಲ್ಲಿ ಈ ರೀತಿಯ ಶಸ್ತ್ರಾಸ್ತ್ರಗಳು ಇರುವುದು ನಮಗೆ ಗೊತ್ತಿರಲಿಲ್ಲ ಎಂದು ಇಬ್ಬರು ಸ್ನೇಹಿತರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಇಬ್ಬರ ಮೇಲೂ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಈ ಬಗ್ಗೆಯೂ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾದ ತಂದೆಯೂ ಅಕ್ರಮದಲ್ಲಿ ಭಾಗಿ:
ಈಗ ಪತ್ತೆಯಾಗಿರುವ ಶಸ್ತ್ರಗಳ ಈಗಿನ ಬೆಲೆ ಎರಡು ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ. ಆಸೀಫ್ಗೆ ಶಸ್ತ್ರಗಳನ್ನು ಪೂರೈಸಿದ ಡೀಲರ್ಗಾಗಿ ಶೋಧಕಾರ್ಯ ನಡೆಯುತ್ತಿದೆ. ಸುಮಾರು ಎಂಟು ತಿಂಗಳ ಹಿಂದೆಯೇ ಆಸೀಫ್ಗೆ ಈ ಶಸ್ತ್ರಗಳು ಸಿಕ್ಕಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಆಸೀಫ್ನ ತಂದೆ ವಜಾದ್ ಅಲಿ ಕೂಡಾ ಮಾಲ್ಡಾದಲ್ಲಿ ಶಸ್ತ್ರಗಳ ಕಳ್ಳಸಾಗಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಬಾಂಗ್ಲಾದೇಶದ ಗಡಿಗಿಂತ ಕೇವಲ ಮೂರು ಕಿಲೋಮೀಟರ್ ದೂರದಲ್ಲಿ ವಜಾದ್ ಕುಟುಂಬ ವಾಸ ಮಾಡುತ್ತಿದ್ದು, ಕಳ್ಳಸಾಗಣೆಗೆ ಪೂರಕವಾಗಿತ್ತು ಎನ್ನಲಾಗಿದೆ.