ಭಾರತದ ನ್ಯಾಯಾಂಗ ವ್ಯವಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಹಿಳಾ ಪರ ತೀರ್ಪುಗಳನ್ನು ನೀಡಿದ್ದು, ಮಹಿಳೆಯರ ಸುರಕ್ಷತೆಗಾಗಿ ನಮ್ಮ ದೇಶ ಕಟಿಬದ್ಧವಾಗಿದೆ ಎಂಬುದನ್ನು ಎತ್ತಿ ತೋರಿಸಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತದ ನ್ಯಾಯಾಲಯಗಳು ನೀಡಿದ ಅತ್ಯಂತ ಪ್ರಮುಖ ಮಹಿಳಾ ಪರ ತೀರ್ಪುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಫೆಬ್ರವರಿ 17, 2020: ಸೈನ್ಯದಲ್ಲಿ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿ
ಭಾರತೀಯ ಸೈನ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ನೇಮಕಾತಿ ನೀಡದಿರುವುದು ಕಾನೂನು ಬಾಹಿರ ಎಂದು ಹೇಳಿದ ಸುಪ್ರೀಂ ಕೋರ್ಟ್, ಸೈನ್ಯದಲ್ಲಿ 3 ತಿಂಗಳೊಳಗೆ ಮಹಿಳಾ ಅಧಿಕಾರಿಗಳ ಶಾಶ್ವತ ಆಯೋಗ ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.
ಅಕ್ಟೋಬರ್ 15, 2020: ಕುಟುಂಬ ಪಾಲಿನ ಮನೆಯಲ್ಲಿ ಮಹಿಳೆ ವಾಸಿಸಬಹುದು
ಮಹಿಳೆಯೋರ್ವಳ ಗಂಡನಿಗೆ ಸೇರದ ಆದರೆ ಆತನ ತಾಯಿಗೆ ಸೇರಿದ ಮನೆಯಲ್ಲಿ ಆ ಮಹಿಳೆ ವಾಸಿಸಲು ಹಕ್ಕುದಾರಳಲ್ಲ ಎಂಬ ಹಳೆಯ ತೀರ್ಪನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೊಡೆದು ಹಾಕಿದೆ. ಗಂಡನಿಲ್ಲದಿರುವಾಗ ಆಕೆ ಗಂಡನ ತಾಯಿಯ ಒಡೆತನದ ಕುಟುಂಬ ಪಾಲಿನ ಮನೆಯಲ್ಲಿ ವಾಸಿಸಲು ಹಕ್ಕುದಾರಳು ಎಂದು ಆದೇಶ ನೀಡಿದೆ.
ಜೂನ್ 11, 2020: ಹೊಟ್ಟೆಯಲ್ಲಿರುವ ಭ್ರೂಣಕ್ಕಿಂತ ಅತ್ಯಾಚಾರ ಸಂತ್ರಸ್ತೆಯ ಪ್ರಾಣ ಮುಖ್ಯ
ಅಪ್ರಾಪ್ತ ಅತ್ಯಾಚಾರ ಸಂತ್ರಸ್ತ ಬಾಲಕಿಯೊಬ್ಬಳು ಅತ್ಯಾಚಾರದಿಂದ ಗರ್ಭಿಣಿಯಾದಾಗ ಅಂಥ ಭ್ರೂಣಕ್ಕೆ ಜನ್ಮ ನೀಡಬೇಕಾ ಅಥವಾ ಬೇಡವಾ ಎಂಬುದನ್ನು ಆಕೆಯೇ ನಿರ್ಧರಿಸುವಲ್ಲಿ ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಪೀಡಿತೆಯ ಹಕ್ಕುಗಳು, ಅತ್ಯಾಚಾರದಿಂದ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಿಂತ ಮೇಲ್ಮಟ್ಟದಲ್ಲಿರುತ್ತವೆ. ಆಕೆ ಬಯಸಿದರೆ ಕೊನೆಯ ವಾರಗಳಲ್ಲಿಯೂ ಭ್ರೂಣವನ್ನು ತೆಗೆಸಿಹಾಕುವ ನಿರ್ಧಾರ ಕೈಗೊಳ್ಳಲು ಸ್ವತಂತ್ರ ಎಂದು ರಾಜಸ್ಥಾನ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಸಂದೀಪ ಮೆಹ್ತಾ ಮತ್ತು ಡಾ. ಪುಷ್ಪೇಂದ್ರ ಸಿಂಗ್ ಭಾಟಿ ಅವರ ನೇತೃತ್ವದ ಪೀಠ ಆದೇಶ ಹೊರಡಿಸಿದೆ.
ಜನೇವರಿ 30, 2020: ಟು ಫಿಂಗರ್ ಪರೀಕ್ಷೆ ಅಸಂವಿಧಾನಿಕ
ಅತ್ಯಾಚಾರ ಪೀಡಿತೆಯ ಮೇಲೆ ಟು ಫಿಂಗರ್ (ಎರಡು ಬೆರಳು ಹಾಕಿ ಪರೀಕ್ಷೆ ಮಾಡುವುದು) ಪರೀಕ್ಷೆ ಮಾಡುವುದು ಸಂವಿಧಾನ ಬಾಹಿರ. ಇದರಿಂದ ಮಹಿಳೆಯ ಖಾಸಗಿತನಕ್ಕೆ ಧಕ್ಕೆಯಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ವಿಶ್ವಾಸಕ್ಕೆ ಕುಂದುಂಟಾಗುವುದೆಂದು ಗುಜರಾತ್ ಹೈಕೋರ್ಟ್ ಹೇಳಿದೆ. ಒಂದೇ ರೀತಿಯ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಭಾರ್ಗವ ಡಿ. ಕರಿಯಾ ಅವರು ತೀರ್ಪು ನೀಡಿದ್ದಾರೆ.
ಮಾರ್ಚ್ 10, 2020: ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಮೂಲಭೂತ ಹಕ್ಕಿನ ಉಲ್ಲಂಘನೆ
ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರ ವರ್ಗಾವಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುವುದು ಆಕೆಯ ಮೂಲಭೂತ ಹಕ್ಕುಗಳ ಸಂಪುರ್ಣ ಉಲ್ಲಂಘನೆಯಾದಂತೆ ಎಂದು ಹೇಳಿದೆ.
ನವೆಂಬರ್ 2, 2020: ಮಗಳಿಗೂ ಅನುಕಂಪದ ಆಧಾರದಲ್ಲಿ ನೌಕರಿ ಪಡೆಯುವ ಹಕ್ಕಿದೆ
ಮಹಿಳೆ ಎಂಬ ಕಾರಣಕ್ಕೆ ಮಗಳಿಗೆ ಅನುಕಂಪದ ಆಧಾರದ ಸರ್ಕಾರಿ ನೌಕರಿ ನಿರಾಕರಿಸುವಂತಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಸರ್ಕಾರಿ ನೌಕರಿಯಲ್ಲಿರುವ ತಂದೆ ಮರಣ ಹೊಂದಿದಾಗ ತನಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕೆಂದು ಮಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್ ಈ ತೀರ್ಪು ನೀಡಿದೆ.
ಸೆಪ್ಟೆಂಬರ್ 25, 2020: ವೇಶ್ಯಾವಾಟಿಕೆ ಅಪರಾಧವಲ್ಲ, ಪ್ರಾಪ್ತ ವಯಸ್ಸಿನ ಮಹಿಳೆ ತನ್ನ ವೃತ್ತಿ ಆರಿಸಿಕೊಳ್ಳಲು ಸ್ವತಂತ್ರಳು
ಅನೈತಿಕ ಸಾಗಾಣಿಕೆ (ತಡೆ) ಕಾಯ್ದೆ, 1956 ರ ಅಡಿ ವೇಶ್ಯಾವಾಟಿಕೆಯನ್ನು ಅಪರಾಧ ಎಂದು ಹೇಳಲಾಗಿಲ್ಲ ಹಾಗೂ ವಯಸ್ಕ ಮಹಿಳೆಯೊಬ್ಬಳು ತನಗೆ ಇಷ್ಟವಾದ ವೃತ್ತಿಯನ್ನು ಕೈಗೊಳ್ಳಲು ಸ್ವತಂತ್ರಳಾಗಿದ್ದಾಳೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್ ವೇಶ್ಯಾವಾಟಿಕೆ ಆರೋಪದಲ್ಲಿ ಬಂಧಿಸಲಾಗಿದ್ದ ಮೂವರು ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಕೂಡ ಆದೇಶಿಸಿದೆ.
ಜುಲೈ 5, 2020: ಪುರುಷನ ದೌರ್ಜನ್ಯದ ವಿರುದ್ಧ ಮಹಿಳೆ ಹೇಗೆ ಬೇಕಾದರೂ ಪ್ರತಿಕ್ರಿಯಿಸಬಹುದು
ಪುರುಷನಿಂದ ದೌರ್ಜನ್ಯ ನಡೆದಾಗ ಮಹಿಳೆಯೋರ್ವಳು ಹೀಗೇ ವರ್ತಿಸಬೇಕು ಎಂದು ನಿರೀಕ್ಷಿಸುವಂತಿಲ್ಲ. ಪ್ರತಿಯೊಬ್ಬ ಮಹಿಳೆಯೂ ವಿಭಿನ್ನ ಪರಿಸರಗಳಲ್ಲಿ ಬೆಳೆದು ಬಂದವರಾಗಿದ್ದರಿಂದ, ಆಕೆಯ ಮೇಲೆ ಪುರುಷನೊಬ್ಬ ದೌರ್ಜನ್ಯ ಎಸಗಿದಾಗ, ಆಯಾ ಸಂದರ್ಭಗಳಿಗೆ ತಕ್ಕಂತೆ ಆಕೆ ವರ್ತಿಸಬಹುದು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.