ಪಾಟ್ನಾ (ಬಿಹಾರ):ಬಿಹಾರದಲ್ಲಿ ಸುರಿದ ಬಿರುಗಾಳಿಸಹಿತ ಮಳೆ ವ್ಯಾಪಕ ಹಾನಿಯುಂಟುಮಾಡಿದೆ. ರಾಜ್ಯದಲ್ಲಿ ಇದುವರೆಗೆ 27 ಮಂದಿ ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಎಲ್ಲಿ ಎಷ್ಟು ಸಾವು?:ಮುಜಾಫರ್‌ಪುರದಲ್ಲಿ 6 ಮತ್ತು ಭಾಗಲ್‌ಪುರದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಲಖಿಸರಾಯ್ ಜಿಲ್ಲೆಯಲ್ಲಿ 3 ಮಂದಿ ಬಲಿಯಾಗಿದ್ದಾರೆ. ವೈಶಾಲಿಯಲ್ಲಿ 2 ಮತ್ತು ಮುಂಗೇರ್‌ನಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ. ಬಂಕಾ, ಜಮುಯಿ, ಕತಿಹಾರ್, ಕಿಶನ್‌ಗಂಜ್, ಜೆಹಾನಾಬಾದ್, ಸರನ್, ನಳಂದಾ ಮತ್ತು ಬೇಗುಸರಾಯ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಇನ್ನೂ ಅನೇಕ ಜನ ಸಾವು-ನೋವಿನ ನಡುವೆ ಹೋರಾಡುತ್ತಿದ್ದಾರೆ.
ಪಾಟ್ನಾದ ಗಾಂಧಿ ಸೇತು ಮತ್ತು ಭಾಗಲ್ಪುರದ ವಿಕ್ರಮಶಿಲಾ ಸೇತುಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡಿದರು. ಗಾಂಧಿ ಸೇತುದಲ್ಲಿ ಚಂಡಮಾರುತದಿಂದಾಗಿ ಟ್ರಕ್ ಪಲ್ಟಿಯಾದ್ರೆ, ವಿಕ್ರಮಶಿಲಾ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿಯಾಗಿದೆ. ಮನೇರ್‌ನ ರತನ್ ಟೋಲಾದಲ್ಲಿ ಮೂರು ದೋಣಿಗಳು ಒಂದರ ಹಿಂದೆ ಒಂದರಂತೆ ಮುಳುಗಿದ್ದು, ದೋಣಿಯಲ್ಲಿದ್ದ ಹಲವರು ಈಜಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಅದರಲ್ಲಿದ್ದ ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.