ಕೋಯಿಕ್ಕೋಡ್ (ಕೇರಳ):ಕೇರಳದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಕೇನ್ ಹಾಗೂ ಹೆರಾಯಿನ್ ಸೇರಿದಂತೆ 44 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿ, ಓರ್ವ ಪ್ರಯಾಣಿಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮುಸಾಫರ್ ನಗರದ ನಿವಾಸಿ ರಾಜೀವ್ ಕುಮಾರ್ ಎಂಬಾತನೇ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನಿಂದ 3.5 ಕೆಜಿ ಕೊಕೇನ್ ಹಾಗೂ 1.3 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಡ್ರಗ್ಸ್ನ ಮೌಲ್ಯ 44 ಕೋಟಿ ರೂಪಾಯಿ ಆಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಜಪ್ತಿ ಮಾಡಿದ ಡ್ರಗ್ಸ್ ಮಾರಾಟಕ್ಕೆ ಯತ್ನ ಆರೋಪ: ಹೈದರಾಬಾದ್ನಲ್ಲಿ ಎಸ್ಐ ಅರೆಸ್ಟ್
ಕೀನ್ಯಾದ ನೈರೋಬಿಯಿಂದ ಶಾರ್ಜಾ ಮೂಲಕ ಏರ್ ಅರೇಬಿಯಾ ವಿಮಾನದಲ್ಲಿ ಆರೋಪಿ ರಾಜೀವ್ ಕುಮಾರ್ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದಿದ್ದ. ಕಂದಾಯ ಗುಪ್ತಚರ ನಿರ್ದೇಶನಾಲಯದ ಕೊಚ್ಚಿ ವಲಯದ ಕ್ಯಾಲಿಕಟ್ ಪ್ರಾದೇಶಿಕ ಘಟಕದ ಅಧಿಕಾರಿಗಳು ಈತನನ್ನು ಯಶಸ್ವಿಯಾಗಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಕೇನ್ ಮತ್ತು ಹೆರಾಯಿನ್ ಸೇರಿ ಒಟ್ಟು 4.8 ಕೆಜಿ ಮಾದಕ ವಸ್ತು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ಪ್ರಯಾಣಿಕ ತನ್ನ ಚೆಕ್ ಇನ್ ಬ್ಯಾಗೇಜ್‌ನಲ್ಲಿದ್ದ ಶೂಗಳು, ಕೈ ಚೀಲಗಳು, ಪಾರ್ಸ್ಗಳು, ಚಿತ್ರಫಲಕಗಳು ಮತ್ತು ಫೈಲ್ ಫೋಲ್ಡರ್‌ಗಳಂತಹ ವಸ್ತುಗಳ ಒಳಗೆ ನಿಷೇಧಿತ ಡ್ರಗ್ಸ್ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ.
ಜಿಂಬಾಬ್ವೆ ವಿದ್ಯಾರ್ಥಿನಿ ಬ್ಯಾಗ್‌ನಲ್ಲಿ ಬುಲೆಟ್ ಪತ್ತೆ:ಮತ್ತೊಂದೆಡೆ, ಮಹಾರಾಷ್ಟ್ರ ರಾಜಧಾನಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿಂಬಾಬ್ವೆ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಬುಲೆಟ್ ಪತ್ತೆಯಾಗಿದ್ದು, ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.
20 ವರ್ಷದ ಪ್ರೋಗ್ರೆಸ್ ಮರುಂಬ್ವಾ ಎಂಬಾಕೆಯೇ ಬಂಧಿತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಮುಂಬೈಗೆ ವಿದ್ಯಾರ್ಥಿನಿ ಆಗಮಿಸಿದ್ದಳು. ಭದ್ರತಾ ಸಿಬ್ಬಂದಿಯ ಪರಿಶೀಲನೆ ವೇಳೆ ಆಕೆಯ ಬ್ಯಾಗ್‌ನಲ್ಲಿ ಬುಲೆಟ್ ಪತ್ತೆಯಾಗಿದೆ. ಆದ್ದರಿಂದ ಸಹರ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಈ ವಿದ್ಯಾರ್ಥಿನಿ ಮೊದಲ ವರ್ಷದ ಬಿಎಸ್ಸಿ (ಮೆಡಿಕಲ್ ಲ್ಯಾಬ್ ಸೈನ್ಸ್) ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗಾಗಿ ಲುಧಿಯಾನಕ್ಕೆ ತೆರಳಬೇಕಿತ್ತು. ಭಾನುವಾರ ಬೆಳಗ್ಗೆ ಮುಂಬೈಗೆ ಆಗಮಿಸಿದ್ದ ಈಕೆ ಅಲ್ಲಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಳು. ಆದರೆ, ವಿಚಾರಣೆ ವೇಳೆ ವಿದ್ಯಾರ್ಥಿನಿ ತನ್ನ ಬ್ಯಾಗ್‌ನಲ್ಲಿ ಯಾರೋ ಬುಲೆಟ್ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. (ಪಿಟಿಐ)
ಇದನ್ನೂ ಓದಿ:ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: 5.49 ಕೋಟಿ ರೂಪಾಯಿ ಮೌಲ್ಯದ 10 ಕೆಜಿ ಚಿನ್ನ ವಶ