ಲಾಹೋರ(ಪಾಕಿಸ್ತಾನ):ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮಾತ್ - ಉದ್ - ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರೀಯ ದಳ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಸತಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಜೋಹಾರ್ ನಗರದ ಮುಮ್ತಾಜ್ ಆಸ್ಪತ್ರೆ ಸಮೀಪದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸ್ಫೋಟದ ತೀವ್ರತೆ ಬಹಳಷ್ಟು ಭೀಕರವಾಗಿದ್ದರಿಂದ ಅನೇಕ ಮನೆಯ ಕಿಟಕಿ ಗಾಜು ಪುಡಿ - ಪುಡಿಯಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದರ ಪಕ್ಕದಲ್ಲೇ ಉಗ್ರ ಹಫೀಜ್ ಸಯೀದ್ ನಿವಾಸವಿತ್ತು ಎಂದು ವರದಿಯಾಗಿದೆ.