ಚಂಡೀಗಢ: ಡ್ರಗ್ಸ್ ಪ್ರಕರಣದಲ್ಲಿ ನಾಪತ್ತೆಯಾಗಿರುವ ಮಾಜಿ ಸಚಿವ ಹಾಗೂ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಂಜಿಥಿಯಾ ಗುರುದ್ವಾರವೊಂದರಲ್ಲಿ ಕಾಣಿಸಿಕೊಂಡಿದ್ದು, ಪ್ರಾರ್ಥನೆ ಮಾಡುತ್ತಿರುವ ಫೋಟೋಗಳನ್ನು ಅಕಾಳಿದಳದ ಯುವ ಘಟಕ ಹಂಚಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ.
ಮಂಜಿಥಿಯಾ ಅವರ ಈ ಫೋಟೋಗಳು ಯಾವಾಗ ಹಾಗೂ ಎಲ್ಲಿ ತೆಗೆದಿರುವುದು ಎಂಬುದು ಇನ್ನಷ್ಟೇ ಖಚಿವಾಗಬೇಕಿದೆ. ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪಂಜಾಬ್‌ನ ಮಾಜಿ ಸಚಿವ ಹಾಗೂ ಅಕಾಲಿದಳದ ಹಿರಿಯ ನಾಯಕ ಮಂಜಿಥಿಯಾ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಎನ್‌ಡಿಪಿಎಸ್ ಕಾಯ್ದೆಯಡಿ ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.
ಆರೋಪಿ ದೇಶದಿಂದ ಹೊರ ಹೋಗದಂತೆ ಕ್ರಮಕೈಗೊಳ್ಳಲು ಪಂಜಾಬ್ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅಕಾಲಿದಳದ ನಾಯಕರು ಆರೋಪಿಸಿದ್ದಾರೆ.
ಎಸ್‌ಎಡಿ ಪಕ್ಷದ ಅಧ್ಯಕ್ಷ ಸುಖ್ಬೀರ್ ಬಾದಲ್ ಅವರ ಸೋದರಮಾವ ಮಜಿಥಿಯಾ ಅವರು ಪಕ್ಷದಲ್ಲಿ ಪ್ರಬಲ ವ್ಯಕ್ತಿಯಾಗಿದ್ದಾರೆ. ಹಿಂದಿನ ಅಕಾಲಿ ಸರ್ಕಾರದಲ್ಲಿ ಭಾರಿ ಪ್ರಭಾವವನ್ನು ಅವರು ಹೊಂದಿದ್ದರು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮಜಿಥಿಯಾ ಅವರು ರಾಜ್ಯದ ಡ್ರಗ್ಸ್ ದಂಧೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಬಹಳ ದಿನಗಳಿಂದ ಆರೋಪಿಸುತ್ತಲೇ ಬಂದಿದ್ದವು. ಆದರೆ ಇದನ್ನು ಮಜಿಥಿಯಾ ನಿರಾಕರಿಸಿದ್ದರು.
ಇದನ್ನೂ ಓದಿ:ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ನಿಯಮ ಮುಂದಿನ ವರ್ಷ ಪರಿಷ್ಕರಣೆ- ಕೇಂದ್ರ ಸರ್ಕಾರ