ಕರ್ನಾಟಕ

karnataka

ETV Bharat / bharat

10ನೇ ವಯಸ್ಸಿಗೆ 3 ಪುಸ್ತಕ ಬರೆದ ಅಭಿಜೀತಾ ಗುಪ್ತಾ.. ಈ ಪುಟಾಣಿ ಯಾರ ಮರಿ ಮೊಮ್ಮಗಳು ಗೊತ್ತಾ? - ಮೈಥಿಲಿ ಶರಣ್​ ಗುಪ್ತಾ

Abhijita gupta become Poet at the age of 10: ರಾಷ್ಟ್ರಕವಿ ಮೈಥಿಲಿ ಶರಣ್​ ಗುಪ್ತಾ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ 74 ಕೃತಿಗಳ ಕೊಡುಗೆ ನೀಡಿದ್ದಾರೆ.

maithili sharan gupta great grand daughter abhijita gupta
10ನೇ ವಯಸ್ಸಿಗೆ 3 ಪುಸ್ತಕ ಬರೆದ ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ ಅವರ ಮರಿ ಮೊಮ್ಮಗಳು ಅಭಿಜಿತಾ ಗುಪ್ತಾ

By ETV Bharat Karnataka Team

Published : Sep 11, 2023, 8:14 PM IST

10ನೇ ವಯಸ್ಸಿಗೆ 3 ಪುಸ್ತಕ ಬರೆದ ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ ಅವರ ಮರಿ ಮೊಮ್ಮಗಳು ಅಭಿಜಿತಾ ಗುಪ್ತಾ

ಗಾಜಿಯಾಬಾದ್​: ಆಟ ಆಡುವ ವಯಸ್ಸಿನಲ್ಲಿ ಮಹತ್ತರ ಸಾಧನೆಯೊಂದನ್ನು ಮಾಡಿದ್ದಾಳೆ ಈ ಪುಟ್ಟ ಬಾಲಕಿ. ವಯಸ್ಸು 10 ವರ್ಷ, ಆದರೆ ಈ ವಯಸ್ಸಿಗೆ ಈಕೆ ಮೂರು ಪುಸ್ತಕಗಳನ್ನು ಬರೆದಿರುವ ಪುಟ್ಟ ಸಾಹಿತಿ. ಈಕೆ ಬೇರೆ ಯಾರೂ ಅಲ್ಲ ರಾಷ್ಟ್ರಕವಿ, ಹಿಂದಿ ಸಾಹಿತ್ಯಲೋಕದ ಹೆಸರಾಂತ ಕವಿ ಮೈಥಿಲಿ ಶರಣ್​ ಗುಪ್ತಾ ಅವರ ಮರಿ ಮೊಮ್ಮಗಳು ಅಭಿಜೀತಾ ಗುಪ್ತಾ. ಗಾಜಿಯಾಬಾದ್​ನಲ್ಲಿ ನೆಲೆಸಿರುವ ಅಭಿಜೀತಾ ಗುಪ್ತಾ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಐದು ವಷರ್ದವಳಿದ್ದಾಗಲೇ ಈ ಪುಟ್ಟ ಕಂದಮ್ಮ ಬರೆಯಲು ಪ್ರಾರಂಭಿಸಿದ್ದಳಂತೆ. ಇದೀಗ ಕಳೆದ ಐದು ವರ್ಷಗಳಳಲ್ಲಿ ಈಕೆ ಮೂರು ಪುಸ್ತಕಗಳನ್ನು ಬರೆದಿದ್ದಾಳೆ.

ರಾಷ್ಟ್ರಕವಿ ಮೈಥಿಲಿ ಶರಣ್​ ಗುಪ್ತಾ ಅವರ ಹೆಸರು ಕೇಳಿದೊಡನೆ ಮೊದಲು ನೆನಪಾಗುವುದು ಅವರ ಅರ್ಥಪೂರ್ಣ, ಶಕ್ತಿಯುತ ಹಾಗೂ ದೇಶಭಕ್ತಿಯ ಕವನಗಳು. ಅವರು ಬರೆದ 'ಭಾರತ ಭಾರತಿ' ಕೃತಿ ಸ್ವಾತಂತ್ರ್ಯ ಹೋರಾಟದ ಸಮಸಯದಲ್ಲಿ ಬಹಳ ಪ್ರಭಾವಶಾಲಿಯಾಗಿತ್ತು. ತಮ್ಮ 59ನೇ ವಯಸ್ಸಿನಲ್ಲಿ ಅವರು ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಸುಮಾರು 74 ಕೃತಿಗಳನ್ನು ಕೊಡುಗೆ ನೀಡಿದ್ದರು. ಅವುಗಳಲ್ಲಿ 2 ಮಹಾಕಾವ್ಯಗಳು, 17 ಭಾವಗೀತೆಗಳು, 20 ಕವನ ಸಂಪುಟಗಳು, ನಾಲ್ಕು ನಾಟಕಗಳು ಹಾಗೂ ಗೀತನಾಟಕಗಳು ಸೇರಿವೆ.

ಇದೀಗ ಅವರ ಮರಿ ಮೊಮ್ಮಗಳು ಅಭಿಜೀತಾ ಕೂತ ಮುತ್ತಾತನ ಹಾದಿಯಲ್ಲೇ ಸಾಗುತ್ತಿದ್ದಾಳೆ. ತನ್ನ 10ನೇ ವಯಸ್ಸಿಗೆ ಬರಹಗಾರ್ತಿಯಾಗಿ ತನ್ನನ್ನು ತಾನು ತಯಾರು ಮಾಡಿಕೊಂಡಿದ್ದಾಳೆ. ಆದರೆ, ಒಂದು ಬದಲಾವಣೆಯೆಂದರೆ ಮೈಥಿಲಿ ಶರಣ್​ ಗುಪ್ತ ಅವರು ಹಿಂದಿಯಲ್ಲಿ ಸಾಹಿತ್ಯ ರಚೆನ ಮಾಡಿದರೆ, ಮರಿ ಮೊಮ್ಮಗಳು ಇಂಗ್ಲಿಷ್​ನಲ್ಲಿ ಪುಸ್ತಕಗಳನ್ನು ಬರೆದಿದ್ದಾಳೆ. ಅಭಿಜೀತಾ ಇಷ್ಟು ಸಣ್ಣ ವಯಸ್ಸಿನಲ್ಲೇ ಪ್ರಬುದ್ಧ ಲೇಖಕಿ ಎನ್ನುವ ಬಿರುದನ್ನು ಪಡೆದಿದ್ದಾಳೆ.

ಹತ್ತನೇ ವಯಸ್ಸಿಗೆ 3 ಪುಸ್ತಕಗಳ ಒಡತಿ: ಗಾಜಿಯಾಬಾದ್​ನ ಇಂದಿರಾಪುರಂನ ನಿವಾಸಿ ಅಭಿಜೀತಾ "ಹ್ಯಾಪಿನೆಸ್​ ಆಲ್​ ಅರೌಂಡ್​", "ಟು ಬಿಗಿನ್​ ವಿತ್​ ದಿ ಲಿಟಲ್​ ಥಿಂಗ್ಸ್​" ಮತ್ತು "ವಿ ವಿಲ್​ ಶ್ಯೂರ್​ಲಿ ಸಸ್ಟೈನ್​"ಎನ್ನುವ ಶೀರ್ಷಿಕೆಯ ಪುಸ್ತಕಗಳನ್ನು ಬರೆದಿದ್ದಾಳೆ. ಇದುವರೆಗೆ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಅಭಿಜೀತಾ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅವರಿಂದಲೂ, ಪ್ರಶಂಸೆ ಪಡೆದುಕೊಂಡಿದ್ದಾಳೆ.

ಮುತ್ತಾತನ ಅನನ್ಯ ಮೌಲ್ಯಗಳ ನೆರಳಲ್ಲಿ ಬೆಳೆದ ಅಭಿಜೀತಾ ಅತ್ಯಂತ ಕಿರಿಯ ಬರಹಗಾರ್ತಿಯಾಗಿದ್ದಾಳೆ. ಅಷ್ಟೇ ಅಲ್ಲದೆ ಅಭಿಜೀತಾ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಹಾಗೂ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್ಸ್​ ಲಂಡನ್​ನಲ್ಲೂ ಹೆಸರು ನೋಂದಾಯಿಸಲಾಗಿದೆ. ಕೇವಲ ಮೂರು ತಿಂಗಳಲ್ಲಿ ಈ ಪುಸ್ತಕವನ್ನು ಬೆರದಿರುವ ಅಭಿಜೀತಾ ಪ್ರೌಢಿಮೆ ಬರಹಗಳಲ್ಲಿ ಗೋಚರಿಸುತ್ತದೆ.

ಪುಟ್ಟ ಸಾಹಿತಿ ಜೊತೆ ನಮ್ಮ ಈಟಿವಿ ಭಾರತ ಮಾತಿಗಿಳಿದಿದ್ದು, ಆಕೆಯ ಜೊತೆಗಿನ ಸಂಭಾಷಣೆಯ ಆಯ್ದ ಭಾಗ ಇಲ್ಲಿದೆ..

ಪ್ರಶ್ನೆ: ಬರೆಯಲು ನಿಮಗೆ ಸ್ಫೂರ್ತಿ ಎಲ್ಲಿಂದ?

ಉತ್ತರ: ನನ್ನ ಸುತ್ತಲಿನ ಪರಿಸರವೇ ನನ್ನ ಬರವಣಿಗೆಗೆ ಸ್ಫೂರ್ತಿ. ನನ್ನೊಳಗಿನ ಭಾವನೆಗಳು, ಆಲೋಚನೆಗಳಿಗೆ ನಾನಿಲ್ಲಿ ಪದಗಳ ರೂಪ ಕೊಟ್ಟಿದ್ದೇನೆ. ಯಾವಾಗಲೂ ಅನೇಕ ಪುಸ್ತಕಗಳನ್ನು ಓದುತ್ತೇನೆ. ಅವುಗಳೇ ನನ್ನ ಕಲ್ಪನೆಯ ವ್ಯಾಪ್ತಿಯನ್ನು ವಿಸ್ತರಿಸಿವೆ.

ಪ್ರಶ್ನೆ: ಬರವಣಿಗೆಗೆ ವಿಷಯದ ಆಯ್ಕೆ ಬಹಳ ಮುಖ್ಯ, ಆ ವಿಷಯವನ್ನು ಎಲ್ಲಿಂದ ಪಡೆಯುತ್ತೀರಿ?

ಉತ್ತರ:ನಾನು ಸಾವಿರಾರು ಜನರನ್ನು ಸುಲಭವಾಗಿ ತಲುಪಬಹುದಾದ ಮತ್ತು ಓದುಗರು ಮತ್ತು ಬರಹಗಾರರ ನಡುವೆ ಸಂಪರ್ಕವನ್ನು ಹೊಂದಿರುವ ವಿಷಯಗಳನ್ನು ಮಾತ್ರ ನಾನು ಆರಿಸಿಕೊಳ್ಳುತ್ತೇನೆ. ಇದರಿಂದ ಸಾವಿರಾರು ಜನರು ಸ್ಫೂರ್ತಿಯಾಗಬಹುದು. ಆಗ ಮಾತ್ರ ನೀವು ಬರಹಗಾರರಾಗಿ ಯಶಸ್ವಿಯಾಗಲು ಸಾಧ್ಯ.

ಪ್ರಶ್ನೆ: ನಿಮ್ಮ ಅಜ್ಜ ದೊಡ್ಡ ಹಿಂದಿ ಕವಿ, ಆದರೆ ನೀವು ಇಂಗ್ಲಿಷ್ ಮಾಧ್ಯಮವನ್ನು ಏಕೆ ಆರಿಸಿದ್ದೀರಿ?

ಉತ್ತರ:ಇತ್ತೀಚಿನ ದಿನಗಳಲ್ಲಿ ನಮ್ಮ ಪಠ್ಯ ಪುಸ್ತಕಗಳು ಇಂಗ್ಲಿಷ್‌ನಲ್ಲಿವೆ. ಬಹುತೇಕ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಾರೆ. ನಾವು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದುತ್ತೇವೆ, ಆದ್ದರಿಂದ ನನ್ನ ಆಲೋಚನೆಗಳನ್ನು ಪದಗಳಲ್ಲಿ ಹಾಕುವ ಸಮಯ ಬಂದಾಗ, ಹಿಂದಿಗಿಂತ ಇಂಗ್ಲಿಷ್ ಸ್ವಲ್ಪ ಸುಲಭ ಎಂದು ನಾನು ಭಾವಿಸುತ್ತೇನೆ. ಆದರೆ ಹಿಂದಿಯಲ್ಲೂ ಬರೆಯಲು ಪ್ರಯತ್ನಿಸುತ್ತಿದ್ದೇನೆ.

ಪ್ರಶ್ನೆ: ಬರವಣಿಗೆಗೆ ನಿಮ್ಮಕುಟುಂಬದಿಂದ ಯಾವ ರೀತಿ ಪ್ರೋತ್ಸಾಹ ದೊರೆಯುತ್ತಿದೆ?

ಉತ್ತರ: ಸಮಸ್ಯೆ ಬಂದಾಗ ಮನೆಯವರು ಬೆನ್ನಿಗೆ ನಿಲ್ಲುತ್ತಾರೆ. ನನ್ನ ಕಥೆ, ಕವನಗಳನ್ನು ಕೇಳಿ, ಹೊಗಳುತ್ತಾರೆ. ಕೆಲವೊಮ್ಮೆ ರಾತ್ರಿ ಅಥವಾ ಮುಂಜಾನೆ ಬರೆಯಬೇಕು. ಆಗ ನನಗೆ ನನ್ನ ಹೆತ್ತವರ ಬೆಂಬಲ ಬೇಕು. ಸಮಯ ನೋಡಿ ಆಲೋಚನೆಗಳು ಬರುವುದಿಲ್ಲ ಎನ್ನುವುದನ್ನು ನನ್ನ ಕುಟುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ.

ಪ್ರಶ್ನೆ: ಬರಹಗಾರರಾಗಲು ಜೀವಮಾನವೇ ಬೇಕು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಯಶಸ್ಸು ಗಳಿಸಿದ್ದು ಹೇಗೆ?

ಉತ್ತರ: ಹಿರಿಯರು ಹೇಳುವಂತೆ ನಮ್ಮ ಉತ್ಸಾಹವನ್ನು ಅನುಸರಿಸುವ ಮೂಲಕ ನಮ್ಮ ಯಶಸ್ಸಿನೆಡೆಗೆ ಸಾಗಲು ಸಾಧ್ಯ. ನಾನು ನನ್ನನ್ನು ಬರಹಗಾರ್ತಿ ಎಂದು ಒಪ್ಪಿಕೊಳ್ಳುವುದಿಲ್ಲ. ನನ್ನ ಹೃದಯದ ಮಾತನ್ನು ಕೇಳುತ್ತೇನೆ. ನನ್ನ ಮುಂದೆ ಅನೇಕ ವಿಷಯಗಳಿವೆ. ನನ್ನ ಜೀವನದಲ್ಲಿ ಬಹಳಷ್ಟು ಮಾಡಬೇಕಾಗಿದೆ.

ಪ್ರಶ್ನೆ: ಬರವಣಿಗೆ ಮತ್ತು ಅಧ್ಯಯನದ ನಡುವೆ ಸಮನ್ವಯವನ್ನು ಹೇಗೆ ಮಾಡುತ್ತೀರಿ?

ಉತ್ತರ: ಅಧ್ಯಯನ ಮತ್ತು ಬರವಣಿಗೆಯ ನಡುವಿನ ಸಮನ್ವಯಕ್ಕೆ ಬಂದಾಗ, ನಾನು ಮೊದಲು ನನ್ನ ಶಾಲೆಯ ಹೋಮ್​ವರ್ಕ್​ ಪೂರ್ಣಗೊಳಿಸುತ್ತೇನೆ. ಏಕೆಂದರೆ ಜೀವನದಲ್ಲಿ ಶಿಕ್ಷಣದ ಮಹತ್ವ ನನಗೆ ತಿಳಿದಿದೆ. ಹಾಗಾಗಿ ನನ್ನ ಹೋಮ್​ವರ್ಕ್​ ಪೂರ್ಣಗೊಳ್ಳದ ಹೊರತು, ನಾನು ಯಾವುದರಲ್ಲೂ ನನ್ನ 100% ನೀಡಲು ಸಾಧ್ಯವಿಲ್ಲ.

ಇದನ್ನೂ ಓದಿ:12ನೇ ಶತಮಾನದ ಬಸವಾದಿ ಶರಣರ ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದು ವಚನ ಗುಮ್ಮಟ ಹಳಕಟ್ಟಿಯವರು: ಡಾ ಸಿ ಕೆ ನಾವಲಗಿ

ABOUT THE AUTHOR

...view details