ಅಮರಾವತಿ/ಆಂಧ್ರಪ್ರದೇಶ :ಭಾನುವಾರ ಪೆನ್ನಾ ನದಿ ಉಕ್ಕಿ ಹರಿದಿದ್ದರಿಂದ ದಕ್ಷಿಣ ಮತ್ತು ಪೂರ್ವ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಆಂಧ್ರಪ್ರದೇಶದ ಮುಖ್ಯ ರೈಲು ಮತ್ತು ರಸ್ತೆ ಮಾರ್ಗಗಳು ಕಡಿತಗೊಂಡಿವೆ.
ಪಡುಗುಪಾಡು ರೈಲ್ವೆ ಹಳಿ ಮೇಲೆ ಪ್ರವಾಹ ಉಕ್ಕಿ ಬಂದಿದ್ದರಿಂದ ಚೆನ್ನೈ-ವಿಜಯವಾಡ ಗ್ರ್ಯಾಂಡ್ ಟ್ರಂಕ್ ಮಾರ್ಗದಲ್ಲಿ ಕನಿಷ್ಠ 17 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇತರ ಮೂರು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಅಥವಾ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರವಾಹದಿಂದಾಗಿ ರೈಲುಗಳ ಸಂಚಾರ ಸ್ಥಗಿತ.. ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-16 ಅನ್ನು ಸಂಪರ್ಕಿಸುವ ನೆಲ್ಲೂರು ಜಿಲ್ಲೆಯ ಪಡುಗುಪಾಡುವಿನಲ್ಲಿ ಪ್ರವಾಹದಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ನೆಲ್ಲೂರು ಜಿಲ್ಲೆಯ ಸೋಮಶಿಲಾ ಜಲಾಶಯದಿಂದ ಎರಡು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದೇ ಪ್ರವಾಹಕ್ಕೆ ಕಾರಣವಾಯ್ತು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಇದರಿಂದ ಕೋವೂರು ರಾಷ್ಟ್ರೀಯ ಹೆದ್ದಾರಿ-16ರಲ್ಲಿಯೂ ಬಿರುಕು ಉಂಟಾಗಿದೆ. ನೆಲ್ಲೂರು ಮತ್ತು ವಿಜಯವಾಡ ನಡುವೆ NH-16ರ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೂರಾರು ವಾಹನಗಳು ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ನಿಂತಿವೆ. ನೆಲ್ಲೂರು ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.
ಶ್ರೀಕಾಳಹಸ್ತಿಯಿಂದ ಬರುವ ವಾಹನಗಳ ಸಂಚಾರವನ್ನು ತೊಟ್ಟೆಂಬೆಡು ಚೆಕ್‌ಪೋಸ್ಟ್‌ನಲ್ಲಿ ನಿಲ್ಲಿಸಿ ಪಾಮೂರು ಮತ್ತು ದರ್ಸಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡಪ ಜಿಲ್ಲೆಯ ಕಮಲಾಪುರಂನಲ್ಲಿ ಪಾಪಾಗ್ನಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದಿದೆ. ಕಡಪ ಮತ್ತು ಅನಂತಪುರಂ ಜಿಲ್ಲೆಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ವೇಲಿಗಲ್ಲು ಜಲಾಶಯದಿಂದ ಪ್ರವಾಹದ ನೀರು ಹರಿದು ಸೇತುವೆ ಕುಸಿತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆ ಕಡಪ ನಗರದಲ್ಲಿ ಭಾನುವಾರ ನಸುಕಿನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಕಟ್ಟಡದಿಂದ ಜನರು ಓಡಿ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಎರಡನೇ ಮಹಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗುವನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.