ಪಾಲ್ವಾಲ್(ಹರಿಯಾಣ) : ಪಾಲ್ವಾಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸಾಗರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಹೋದರ ಮತ್ತು ಕೆಲವು ಸ್ನೇಹಿತರೊಂದಿಗೆ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಸನ್ಪುರ ಪೊಲೀಸ್ ಠಾಣೆ ಎಸ್ಐ ರಾಜೇಶ್ ಕುಮಾರ್ ಯುವತಿಯ ದೂರು:
ದೆಹಲಿಯಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಪಾಲ್ವಾಲ್‌ನಲ್ಲಿ ತನ್ನ ಮೇಲೆ 25 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ 25 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಇದೀಗ ಮುಖ್ಯ ಆರೋಪಿ ಸಾಗರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಮೂಲದ ಯುವತಿ ತನ್ನ ಫೇಸ್‌ಬುಕ್ ಸ್ನೇಹಿತ ರಾಮ್‌ಗಢದ ನಿವಾಸಿ ಸಾಗರ್‌ನನ್ನು ಭೇಟಿಯಾಗಲು ಮೇ 3 ರಂದು ತೆರಳಿದ್ದಳು ಎಂದು ಹಸನ್ಪುರ ಪೊಲೀಸ್ ಠಾಣೆ ಎಸ್ಐ ರಾಜೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಫೇಸ್‌ಬುಕ್ ಫ್ರೆಂಡ್ ಭೇಟಿಗೆ ತೆರಳಿದ ಯುವತಿಯ ಮೇಲೆ 25 ಜನರಿಂದ ಅತ್ಯಾಚಾರ
ಮದುವೆ ಮಾತುಕತೆಗೆ ಕರೆದು ಅತ್ಯಾಚಾರ ಆರೋಪ:
ಯುವತಿ ಮೂಲತಃ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಮೂಲದವಳು. ಆದರೆ ಸದ್ಯ ದೆಹಲಿಯಲ್ಲಿ ವಾಸಿಸುತ್ತಿದ್ದಾಳೆ. ಈ ಸಂದರ್ಭದಲ್ಲಿ ಆರೋಪಿ ಸಾಗರ್ ಆಕೆಯೊಂದಿಗೆ ಫೇಸ್‌ಬುಕ್ ಮೂಲಕ ಸ್ನೇಹ ಬೆಳೆಸಿದ್ದಾನೆ. ಸ್ನೇಹ ಪ್ರೀತಿಗೆ ತಿರುಗಿ ಯುವತಿ ಮದುವೆಗೆ ಒತ್ತಾಯಿಸಿದಾಗ, ಆರೋಪಿ ತನ್ನ ಕುಟುಂಬದವರಿಗೆ ಭೇಟಿ ಮಾಡಿಸುವ ನೆಪದಲ್ಲಿ ಆಕೆಯನ್ನು ಕರೆದಿದ್ದಾನೆ. ಇದಕ್ಕೂ ಮುನ್ನ ತನ್ನನ್ನು ಭೇಟಿ ಮಾಡುವಂತೆಯೂ ಯುವತಿಗೆ ಹೇಳಿದ್ದಾನೆ. ಇದಕ್ಕೆ ಒಪ್ಪಿದ ಯುವತಿಯು ಸಾಗರ್‌ನನ್ನು ಭೇಟಿಯಾಗಲು ತೆರಳಿದ್ದಾಳೆ. ಈ ವೇಳೆ ಕಾಮಪಿಪಾಸುಗಳು ಆಕೆಯನ್ನು ಅಪಹರಿಸಿ ಅಲ್ಲಿನ ರಾಮಗಢವೆಂಬ ಪ್ರದೇಶದ ಅರಣ್ಯಕ್ಕೆ ಕರೆದೊಯ್ದಿದ್ದಾರೆ. ಬಳಿಕ ರಾತ್ರಿಯಿಡೀ ಕಾಡಿನಲ್ಲಿ ಆಕೆಯ ಮೇಲೆ 25 ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಮೇ 12 ರ ತಡರಾತ್ರಿ, ಹಸನ್ಪುರ ಪೊಲೀಸರು ಸಾಗರ್, ಸಮುದ್ರ ಮತ್ತು ಆಕಾಶ್ ಸೇರಿದಂತೆ ಇತರ 22 ಯುವಕರ ವಿರುದ್ಧ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈಗ ಪ್ರಕರಣದ ಪ್ರಮುಖ ಆರೋಪಿ ಸಾಗರ್ ಎಂಬಾತನನ್ನು ಬಂಧಿಸಲಾಗಿದೆ.