ನವದೆಹಲಿ:ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅಫಿಡವಿಟ್‌ನಲ್ಲಿ ಸುಳ್ಳು ಶೈಕ್ಷಣಿಕ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಗಂಭೀರ ಆರೋಪ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಮಾಡಿದ ಆರೋಪ ಏನು?:ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಲೋಕಸಭೆಯ ಸದಸ್ಯತ್ವವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ್ದರು. ಈ ಹಕ್ಕುಚ್ಯುತಿ ನೋಟಿಸ್ ನೀಡಿದ ಕೆಲವೇ ದಿನಗಳಲ್ಲಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಟ್ವಿಟರ್‌ನಲ್ಲಿ ಅವರ ಗಂಭೀರ ಆರೋಪ ಮಾಡಿದ್ದಾರೆ. ಹೌದು, ದುಬೆ ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ದುಬೆ ಅವರ ಅಫಿಡವಿಟ್ ಅನ್ನು ಪೋಸ್ಟ್ ಮಾಡಿದ್ದಾರೆ.
ಸಂಸದೆ ಮೊಯಿತ್ರಾ ಟ್ವೀಟಾಸ್ತ್ರ:ಮೊದಲ ಟ್ವೀಟ್‌ನಲ್ಲಿ ಮೊಯಿತ್ರಾ ಅವರು, 2009ರಿಂದ ದುಬೆ ಅವರ ನಾಮನಿರ್ದೇಶನ ಪತ್ರದ ಅಫಿಡವಿಟ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು 1993ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ತಮ್ಮ ಎಂಬಿಎ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದುಬೆ 2019ರ ಮೊದಲು ಅವರ ಶೈಕ್ಷಣಿಕ ಅರ್ಹತೆಗಳ ಸಂಪೂರ್ಣ ಪಟ್ಟಿಯನ್ನು ನೀಡಿಲ್ಲ ಎಂದು ಮೊಯಿತ್ರಾ ಗಮನಸೆಳೆದಿದ್ದಾರೆ.
ಆರ್‌ಟಿಐ ಮಾಹಿತಿಯಲ್ಲೇನಿದೆ?:ಮೊಯಿತ್ರಾ ಅವರ ಎರಡನೇ ಟ್ವೀಟ್‌ನಲ್ಲಿ, ದೆಹಲಿ ವಿಶ್ವವಿದ್ಯಾನಿಲಯದ ಡೀನ್ , ಜಾರ್ಖಂಡ್‌ನ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದಾರೆ. 1993ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಕಾರ್ಯಕ್ರಮಕ್ಕೆ ನಿಶಿಕಾಂತ್ ದುಬೆ ಎಂಬ ಹೆಸರಿನ ಯಾರೂ ಪ್ರವೇಶ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಈ ಮಾಹಿತಿಯನ್ನು ಆರ್‌ಟಿಐ ಪ್ರಶ್ನೆಯ ಮೂಲಕ ಪಡೆಯಲಾಗಿದೆ. ವಿಶ್ವವಿದ್ಯಾನಿಲಯವು 2020ರಲ್ಲಿ ಲಿಖಿತ ಪ್ರತಿಕ್ರಿಯೆಯನ್ನು ನೀಡಿದೆ ಎಂಬ ಅಂಶವನ್ನು ಮೊಯಿತ್ರಾ ಎತ್ತಿ ತೋರಿಸಿದ್ದಾರೆ. ದುಬೆ ಅವರು 1993ರಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಿಂದ ಉತ್ತೀರ್ಣರಾಗಿಲ್ಲ ಎಂದು ಅವರು ಹೇಳಿದ್ದಾರೆ.