ನವದೆಹಲಿ:2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗಿಯಾಗಿ ಚಿನ್ನ ಸೇರಿದಂತೆ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ 19 ವರ್ಷದ ಅವನಿ ಲೇಖರಾಗೆ ಇದೀಗ ಉದ್ಯಮಿ ಆನಂದ ಮಹೀಂದ್ರ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವನಿ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಜಪಾನ್ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಯುವ ಶೂಟರ್ ಅವನಿ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಹಾಗೂ ಮಹಿಳೆಯರ 50 ಮೀಟರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಪ್ಯಾರಾಂಲಿಪಿಕ್ಸ್ ಇತಿಹಾಸದಲ್ಲೇ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಪ್ಯಾರಾ ಅಥ್ಲೇಟ್ ಎಂಬ ದಾಖಲೆ ಬರೆದಿದ್ದರು.
ಪ್ಯಾರಾಲಿಂಪಿಕ್ಸ್ನಲ್ಲಿ ಐತಿಹಾಸಿಕ ಸಾಧನೆ ಮಾಡುತ್ತಿದ್ದಂತೆ ಉದ್ಯಮಿ ಆನಂದ್ ಮಹೀಂದ್ರ XUV ಕಾರು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದರು. ಇದೀಗ ಮಹೀಂದ್ರ ಕಂಪನಿ XUV700 Gold Edition ಕಾರು ಗಿಫ್ಟ್ ನೀಡಿದೆ. ಈ ಕಾರು ವಿಶೇಷ ಚೇತನರಿಗಾಗಿ ಸುಲಭವಾಗಿ ಡ್ರೈವ್ ಮಾಡಲು ತಯಾರಾಗಿದೆ. ಈಗಾಗಲೇ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ, ಪ್ಯಾರಾ ಅಥ್ಲೀಟ್ ಸುಮಿತ್ ಅಂತಿಲ್ಗೂ XUV ಉಡುಗೊರೆಯಾಗಿ ನೀಡಲಾಗಿದೆ.