ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಹಿಳಾ ಸಬಲೀಕರಣಕ್ಕಾಗಿ ಹೊಸ ಉಳಿತಾಯ ಯೋಜನೆಯೊಂದನ್ನು ಘೋಷಿಸಿದ್ದಾರೆ. 'ಮಹಿಳಾ ಸಮ್ಮಾನ್ ಬಚತ್ ಪತ್ರ' ಎನ್ನುವ ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆ ಘೋಷಿಸಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಶೇ 7.5 ಬಡ್ಡಿ ದರದಲ್ಲಿ 2 ಲಕ್ಷದವರೆಗೆ ಠೇವಣಿ ಇಡುವ ಅವಕಾಶವನ್ನು ಕಲ್ಪಿಸಲಾಗಿದೆ. 2025ರ ವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಿರುವ ಠೇವಣಿ ಸೌಲಭ್ಯವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
'ಯೋಜನೆಯ ಫಲಾನುಭವಿಗಳು ಎರಡು ವರ್ಷಗಳ ಅವಧಿಗೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹೆಸರಿನಲ್ಲಿ 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು ಈ ಯೋಜನೆಯಲ್ಲಿ ಪಡೆಯುತ್ತಾರೆ. ಬಡ್ಡಿದರವನ್ನು ಶೇಕಡಾ 7.5 ಕ್ಕೆ ನಿಗದಿಪಡಿಸಲಾಗುವುದು ಮತ್ತು ಠೇವಣಿದಾರರಿಗೆ ಭಾಗಶಃ ಹಿಂಪಡೆಯುವ ಆಯ್ಕೆಯನ್ನು ಒದಗಿಸಲಾಗುತ್ತದೆ' ಎಂದು ಎಂದು ಹಣಕಾಸು ಸಚಿವರು ಹೇಳಿದರು.
'ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಠೇವಣಿಗಳ ಮೇಲಿನ ಗರಿಷ್ಠ ಮಿತಿಯನ್ನು 15 ಲಕ್ಷದಿಂದ 13 ಲಕ್ಷಕ್ಕೆ ಹೆಚ್ಚಿಸಲಾಗಿದೆ' ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು.
'ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ, ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಮಾರ್ಚ್ 2025 ರವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಾಗುವಂತೆ ಮಾಡಲಾಗುವುದು. ಇದು 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು ನೀಡುತ್ತದೆ. ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ ಶೇಕಡಾ 7.5 ರ ಸ್ಥಿರ ಬಡ್ಡಿದರದಲ್ಲಿ 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ ನೀಡಲಾಗುತ್ತದೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.