ಮುಂಬೈ: ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ತನ್ನ ಮಹತ್ವದ ಸಭೆ ಆಯೋಜಿಸಿರುವ ಬೆನ್ನಲ್ಲೇ, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ನೇತೃತ್ವದಲ್ಲಿ), ಎನ್ಸಿಪಿ ಮತ್ತು ಇತr ಎಲ್ಲ ಮಿತ್ರ ಪಕ್ಷಗಳನ್ನು ಒಳಗೊಂಡಿರುವ 'ಮಹಾಯುತಿ' ಮೈತ್ರಿಕೂಟದ ಸಭೆಯು ಮುಂಬೈನಲ್ಲಿ ನಡೆಯಲಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಸೇರಿದಂತೆ ಇತರ ಸಚಿವರು ಮತ್ತು ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್ಸಿಪಿಯ ಅಜಿತ್ ಪವಾರ್ ಗುಂಪಿನ ನಾಯಕ ಸುನಿಲ್ ತಟ್ಕರೆ ತಿಳಿಸಿದ್ದಾರೆ. 48 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಭವಿಷ್ಯವನ್ನು ಪರಿಶೀಲಿಸಲು ಈ ಸಭೆ ನಡೆಸುತ್ತಿರುವುದಾಗಿ ಅವರು ವಿವರಿಸಿದ್ದಾರೆ.
ಎರಡು ದಿನಗಳ ಸಭೆ: ಪಾಟ್ನಾ ಮತ್ತು ಬೆಂಗಳೂರಿನ ನಂತರ ವಿಪಕ್ಷಗಳ ಮೈತ್ರಿಕೂಟದ 'ಇಂಡಿಯಾ'ದ ಮೂರನೇ ಸಭೆಯು ವಾಣಿಜ್ಯನಗರಿ ಮುಂಬೈನಲ್ಲಿ ನಡೆಯುತ್ತಿದೆ. 2024ರ ಚುನಾವಣೆಯಲ್ಲಿ ಗೆಲ್ಲಲು ಯಾವ ತಂತ್ರ ರೂಪಿಸಬೇಕು ಎಂಬುದರ ಕುರಿತು ಚರ್ಚಿಸಲು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿರುವ ಮೂರನೇ ಸಭೆಯಲ್ಲಿ ವಿಪಕ್ಷಗಳ ಮೈತ್ರಿಕೂಟದ ನಾಯಕರು ಭಾಗವಹಿಸಲಿದ್ದಾರೆ. ಈ ಬೆನ್ನಲ್ಲೇ 'ಮಹಾಯುತಿ' ಮೈತ್ರಿಕೂಟವೂ ಇದೇ ಎರಡು ದಿನದಂದು ಸಭೆಯನ್ನು ಆಯೋಜಿಸಿದ್ದು, ಕೆಲವೊಂದು ಮಹತ್ವದ ವಿಚಾರಗಳು ಚರ್ಚೆಯಾಗಲಿದೆ.