ವಾರ್ಧಾ(ಮಹಾರಾಷ್ಟ್ರ): ಹಿಂದಿಯನ್ನು ಪ್ರಚಾರ ಮಾಡುವಾಗ ಮಹಾತ್ಮ ಗಾಂಧಿಯವರು ಮಾತೃಭಾಷೆಯ ಬಳಕೆ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಯಾವುದೇ ಭಾಷೆಯನ್ನು ಯಾರ ಮೇಲೂ ಹೇರಬಾರದೆಂದು ಅವರು ನಂಬಿದ್ದರು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯದಲ್ಲಿ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ, ವಿವಿ ಆವರಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಭವನ ಹಾಗೂ ಚಂದ್ರಶೇಖರ್ ಆಜಾದ್ ಹಾಸ್ಟೆಲ್ ಉದ್ಘಾಟಿಸಿ ಬಳಿಕ ವೆಂಕಯ್ಯ ನಾಯ್ಡು ಅವರು ಭಾಷಣ ಮಾಡಿದರು.
ಹೊಸ ಶಿಕ್ಷಣ ನೀತಿ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಅನುಸರಿಸುತ್ತದೆ. ಪ್ರಾಥಮಿಕ ಮತ್ತು ಮಧ್ಯಮ ಶಾಲಾ ಹಂತದಲ್ಲಿ ಮಾತೃಭಾಷೆಯ ಬಳಕೆಯನ್ನೂ ಇದು ಪ್ರಸ್ತಾಪಿಸುತ್ತದೆ.
ಹಿಂದಿ ಭಾಷಾಂತರದೊಂದಿಗೆ ಇತರ ಭಾರತೀಯ ಭಾಷೆಗಳ ಸಾಹಿತ್ಯವೂ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು. ವಿಶ್ವವಿದ್ಯಾಲಯಗಳ ಭಾಷಾ ವಿಭಾಗಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ಭಾಷೆಯ ಸಭ್ಯತೆ, ಪದಗಳ ಬಳಕೆಯ ಶಿಸ್ತನ್ನು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಳಸಿಕೊಳ್ಳೋಣ. ನಮ್ಮ ಬರಹಗಳಿಂದ ಸಮಾಜಕ್ಕೆ ಒಳಿತಾಗಬೇಕು. ನಾಗರಿಕ ಸಮಾಜದಿಂದ ತನ್ನ ಭಾಷೆ ಸೌಮ್ಯ, ಸುಸಂಸ್ಕೃತ ಹಾಗೂ ಸೃಜನಶೀಲತೆಯನ್ನು ನಿರೀಕ್ಷಿಸುತ್ತದೆ. ವಿಶ್ವವಿದ್ಯಾನಿಲಯದ ಸಂಸ್ಕಾರಗಳು, ಸಾಹಿತ್ಯ ಬರಹಗಳು, ಸುಸಂಸ್ಕೃತ ಸಂಭಾಷಣೆಯನ್ನು ಮೈಗೂಡಿಸಿಕೊಳ್ಳಬೇಕೇ ಹೊರತು ಸಂಘರ್ಷವಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.