ಮುಂಬೈ(ಮಹಾರಾಷ್ಟ್ರ):ಮಹಾತ್ಮಾ ಗಾಂಧಿ ಅವರು ಕಳೆದ ಶತಮಾನದ ಮಹಾಪುರುಷ. ಪ್ರಧಾನಿ ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಬಣ್ಣಿಸಿದ್ದಾರೆ. ಸೋಮವಾರ ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ನಾವು ಬಯಸಿದ ಹಾದಿಯೆಡೆಗೆ ನಮ್ಮನ್ನು ಕೊಂಡೊಯ್ದಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
1867ರಲ್ಲಿ ಗುಜರಾತ್‌ನಲ್ಲಿ ಜನಿಸಿದ ಮತ್ತು 1901ರಲ್ಲಿ ನಿಧನರಾದ ಶ್ರೀಮದ್ ರಾಜ್‌ಚಂದ್ರಜಿ ಅವರ ಭಿತ್ತಿಚಿತ್ರವನ್ನು ಧನಖರ್ ಬಿಡುಗಡೆಗೊಳಿಸಿದರು. ರಾಜ್‌ಚಂದ್ರಜಿ ಅವರ ಬೋಧನೆಗಳು ಇಂದಿಗೂ ಪ್ರಸ್ತುತ. ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾತ್ಮಕ ಹೋರಾಟಗಳಿಂದ ಬ್ರಿಟಿಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದರು. ನಾವು ಯಾವಾಗಲೂ ನೋಡಬಯಸುವ ಪ್ರಗತಿಯ ಪಥದಲ್ಲಿ ಪ್ರಧಾನಿ ಮೋದಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಗಾಂಧಿ ಮತ್ತು ಮೋದಿ ಇಬ್ಬರೂ ಶ್ರೀಮದ್ ರಾಜಚಂದ್ರಜಿಯವರ ಬೋಧನೆಗಳನ್ನು ಪ್ರತಿಬಿಂಬಿಸಿದ್ದಾರೆ ಎಂದು ಧನಕರ್ ಅಭಿಪ್ರಾಯಪಟ್ಟರು.
ಶ್ರೀಮದ್ ರಾಜಚಂದ್ರ ಮಿಷನ್ ಧರ್ಮಪುರ್ ಜಾಗತಿಕ ಆಂದೋಲನವಾಗಿದೆ. ಇದು ಅನ್ವೇಷಕರ ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಾಗೂ ಸಮಾಜಕ್ಕೆ ಪ್ರಯೋಜನ ನೀಡಲು ಪ್ರಯತ್ನಿಸುತ್ತದೆ. ಗುಜರಾತ್‌ನ ಧರಮ್‌ಪುರದಲ್ಲಿ ಅದರ ಅಂತರರಾಷ್ಟ್ರೀಯ ಕೇಂದ್ರ ಕಚೇರಿಯೊಂದಿಗೆ, ಮಿಷನ್ ಹಲವಾರು ಸತ್ಸಂಗ ಕೇಂದ್ರಗಳು, ಶ್ರೀಮದ್ ರಾಜಚಂದ್ರ ಯೂತ್ ಗ್ರೂಪ್‌ಗಳು ಮತ್ತು ಶ್ರೀಮದ್ ರಾಜಚಂದ್ರ ಡಿವೈನ್ ಟಚ್ ಸೆಂಟರ್‌ಗಳಿವೆ. ಶ್ರೀಮದ್ ರಾಜ್‌ಚಂದ್ರಜಿ ಮತ್ತು ಮಹಾತ್ಮ ಗಾಂಧಿ 1891ರಲ್ಲಿ ಮುಂಬೈನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.
ಸೋಮವಾರ ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಮಿಷನ್‌ನ ಗುರುದೇವಶ್ರೀ ರಾಕೇಶ್‌ಜಿ, ಸಮಾಜಕ್ಕೆ ನೀಡಿದ ಉನ್ನತ ಕೊಡುಗೆಗಳನ್ನು ಪರಿಗಣಿಸಿ ಉಪರಾಷ್ಟ್ರಪತಿ ಧನಕರ್ ಅವರಿಗೆ 'ಜನಕಲ್ಯಾಣ ಹಿತೈಷಿ ಪ್ರಶಸ್ತಿ' ಪ್ರದಾನ ಮಾಡಿದರು.