ಕರ್ನಾಟಕ

karnataka

ETV Bharat / bharat

ಗಡಿ ಕ್ಯಾತೆ ಬಳಿಕ ಜಲ ತಂಟೆ: ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಗಾದೆ - ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಗಾದೆ

ಬೆಳಗಾವಿ ಗಡಿ ವಿವಾದ - ಆಲಮಟ್ಟಿ ಜಲಾಶಯ ಎತ್ತರಕ್ಕೆ ಮಹಾರಾಷ್ಟ್ರ ವಿರೋಧ - ಮಹಾ ಸರ್ಕಾರದಿಂದ ಗಡಿ ಬಳಿಕ ಜಲ ತಗಾದೆ - ಯೋಜನೆ ನಿಲ್ಲಿಸಿ ಎಂದ ಡಿಸಿಎಂ ದೇವೇಂದ್ರ ಫಡ್ನವೀಸ್​

maharastra-oppose-karnatakas-alamatty-dam-work
ಆಲಮಟ್ಟಿ ಜಲಾಶಯದೆತ್ತರಕ್ಕೆ ಮಹಾರಾಷ್ಟ್ರ ತಗಾದೆ

By

Published : Dec 29, 2022, 12:50 PM IST

ನಾಗಪುರ(ಮಹಾರಾಷ್ಟ್ರ):ಗಡಿ ವಿವಾದಕ್ಕೆ ಆಜ್ಯ ಸುರಿದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಈಗ ಜಲ ಕ್ಯಾತೆ ತೆಗೆದಿದ್ದಾರೆ. ಕೃಷ್ಣಾನದಿಯ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಯೋಜನೆಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಜಲಾಶಯದಿಂದ ಸಾಂಗ್ಲಿಯ ಪ್ರದೇಶಗಳಿ ಮುಳುಗಡೆಯಾಗಲಿದ್ದು, ಅದರ ಅಧ್ಯಯನ ಮುಗಿಯುವವರೆಗೂ ಕಾಮಗಾರಿ ನಿಲ್ಲಿಸುವಂತೆ ಸರ್ಕಾರವನ್ನು ಕೋರಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಫಡ್ನವೀಸ್, ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಮನವಿಗೆ ಕಿವಿಗೊಡದಿದ್ದರೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದರು. ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸಿದ ಪರಿಣಾಮ ಮತ್ತು ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ಜಲಸಂಪನ್ಮೂಲ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ನಂದಕುಮಾರ್ ವಡ್ನೇರಾ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯನ್ನು ನೇಮಿಸಿದೆ ಎಂದು ತಿಳಿಸಿದರು.

ಎತ್ತರಿಸಿದ ಅಣೆಕಟ್ಟಿನಿಂದಾಗಿ 2019 ರಲ್ಲಿ ದಕ್ಷಿಣ ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ವಿನಾಶಕಾರಿ ಪ್ರವಾಹ ಉಂಟಾಯಿತು. ಹೀಗಾಗಿ ಇದರ ಬಗ್ಗೆ ಅಧ್ಯಯನ ಸಮಿತಿ ರಚಿಸಲಾಗಿದೆ. ಆದರೆ, ವಡ್ನೇರಾ ಸಮಿತಿ 2020 ರಲ್ಲಿ ವರದಿ ನೀಡಿದ್ದು, ಕೃಷ್ಣಾ ನದಿಯ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಎತ್ತರದಿಂದ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

ಏ‌ನಿದು ಉಭಯ ರಾಜ್ಯಗಳ ಗಡಿ ಕ್ಯಾತೆ ವಿವಾದ?:ಮಹಾರಾಷ್ಟ್ರ- ಕರ್ನಾಟಕದ ಗಡಿ ವಿವಾದ ಪ್ರಾರಂಭವಾಗಿದ್ದು 1953ರಲ್ಲಿ. ಭಾಷಾವಾರು ಪ್ರಾಂತ್ಯ ರಚನೆಗೆ 1953ರಲ್ಲಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆಯಾಯಿತು. ಈ ಸಮಿತಿ ನೀಡಿದ ವರದಿಯ ಪ್ರಕಾರ ಮುಂಬೈ ಪ್ರಾಂತ್ಯದಲ್ಲಿದ್ದ 865 ಗ್ರಾಮಗಳು (ಬೆಳಗಾವಿಯೂ ಸೇರಿ) ಆಗಿನ ಮೈಸೂರು ರಾಜ್ಯಕ್ಕೆ ಸೇರಿದವು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

1956ರಲ್ಲಿ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನ ಗೊಳಿಸಲಾಯಿತು. ಆದರೆ, ಇದನ್ನು ಮಹಾರಾಷ್ಟ್ರ ಸರ್ಕಾರ ವಿರೋಧಿಸಿತು. ಹೀಗಾಗಿ ಬೆಳಗಾವಿ ಗಡಿ ವಿವಾದ 1956 ರಿಂದಲೇ ಆರಂಭಗೊಂಡಿತು. ಮಹಾರಾಷ್ಟ್ರ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರ ಜಸ್ಟಿಸ್ ಮೆಹರ್‌ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಮಹಾಜನ್ ಆಯೋಗವನ್ನು ಸ್ಥಾಪಿಸಿತು.

ಆಯೋಗ, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಾದಗಳನ್ನು ಆಲಿಸಿ, ಗಡಿ ಪ್ರದೇಶದ 2,572 ಜನರನ್ನು ಸಂದರ್ಶಿಸಿ ಅವರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದ ಆಯೋಗವು ತನ್ನ ತೀರ್ಪನ್ನು ಪ್ರಕಟಿಸಿತು. ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ ಸಮಿತಿ ವರದಿ ಸಲ್ಲಿಸಿತು.

ಮಹಾಜನ್ ವರದಿ ಶಿಫಾರಸು ಏನು?:ಮಹಾಜನ ವರದಿಯಲ್ಲಿ ದಕ್ಷಿಣ ಸೋಲಾಪುರದ 65 ಹಳ್ಳಿಗಳು, ಸಂಪೂರ್ಣ ಅಕ್ಕಲಕೋಟೆ ತಾಲೂಕು, ಜತ್ತಾ ತಾಲೂಕಿನ 44 ಹಳ್ಳಿಗಳು, ಗಡ ಹಿಂಗ್ಲಜ ತಾಲೂಕಿನ 15 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು ಎಂದು ಸಮಿತಿ ಶಿಫಾರಸು ಮಾಡಿತು. ಕರ್ನಾಟಕ ಈ ಶಿಫಾರಸನ್ನು ಒಪ್ಪಿಕೊಂಡಿತು.

ಇತ್ತ ವರದಿಯಂತೆ ಬೆಳಗಾವಿ ತಾಲೂಕಿನ 12 ಹಳ್ಳಿಗಳು, ಖಾನಾಪುರ ತಾಲೂಕಿನ 152 ಹಳ್ಳಿಗಳು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 41 ಹಳ್ಳಿಗಳು, ಹುಕ್ಕೇರಿ ತಾಲೂಕಿನ 9 ಹಳ್ಳಿಗಳು, ಇತಿಹಾಸ ಪ್ರಸಿದ್ಧ ನಂದಗಡ, ಕಕ್ಕಸಕೊಪ್ಪ ಜಲಾಶಯ ಇವೆಲ್ಲಾ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿತ್ತು. ಕರ್ನಾಟಕ ಈ ವರದಿಯನ್ನು ಒಪ್ಪಿಕೊಂಡಿತು. ಆದರೆ, ಬೆಳಗಾವಿಯನ್ನು ಕಳೆದುಕೊಂಡ ಮಹಾರಾಷ್ಟ್ರ ಇಂದಿಗೂ ಇದರ ವಿರುದ್ಧ ಅಪಸ್ವರ ಎತ್ತುತ್ತಿದೆ.

ಮಹಾಜನ್ ವರದಿಯನ್ನೂ ಒಪ್ಪದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

ಓದಿ:ಬೆಳಗಾವಿ ಗಡಿ ವಿವಾದ ನಿಲುವಳಿ ಸೂಚನೆ ಮಂಡಿಸಿದ ಮಹಾ ಸರ್ಕಾರ.. ಸರ್ವಪಕ್ಷಗಳಿಂದ ಒಮ್ಮತದ ಅಂಗೀಕಾರ

ABOUT THE AUTHOR

...view details