ಜಲ್ನಾ (ಮಹಾರಾಷ್ಟ್ರ):ಸರ್ಕಾರಿ ಕೆಲಸ ಕಾರ್ಯಗಳಿಗೆ 'ಲಂಚ' ಎಂಬುವುದು ಅಲಿಖಿತ ನಿಯಮ. ಯಾವುದೇ ಇಲಾಖೆಗೆ ಹೋದರೂ ಲಂಚ ನೀಡದೆ ಕೆಲಸವೇ ಆಗಲ್ಲ ಎಂಬ ಮಾತು ಜನಜನಿತ. ನಿರ್ದಿಷ್ಟ ಹಣ ಪಡೆದ ಬಳಿಕವೇ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕೆಲಸ ಮಾಡುತ್ತಾರೆ ಎಂಬುವುದು ಜನಸಾಮಾನ್ಯರ ನಿತ್ಯದ ದೂರು. ಇದರ ನಡುವೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ವಿಚಿತ್ರ ಲಂಚ ಪ್ರಕರಣ ಬಯಲಿಗೆ ಬಂದಿದೆ. ಹಣದೊಂದಿಗೆ ದುಬಾರಿ ಮದ್ಯ ನೀಡಬೇಕು ಎಂಬುದು ಇಲ್ಲಿನ ಅಧಿಕಾರಿಗಳ ಬೇಡಿಕೆಯಂತೆ!.
ಇಂತಹದ್ದೊಂದು ಬೆಚ್ಚಿಬೀಳಿಸಿದ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಬದ್ನಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ಮಹಿಳೆ ಸೇರಿ ಇಬ್ಬರು ಗ್ರಾಮ ಸೇವಕರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಕಾಮಗಾರಿ ಹಣ ಮಂಜೂರು ಮಾಡಲು ಏಳು ಸಾವಿರ ರೂಪಾಯಿ ನಗದು ಮತ್ತು ಎರಡು ಬಾಟಲಿ ಬ್ಲ್ಯಾಕ್ ಡಾಗ್ ಸ್ಕಾಚ್ ವಿಸ್ಕಿಗೆ ಬೇಡಿಕೆ ಇಟ್ಟಿರುವುದೂ ಬಯಲಾಗಿದೆ.
ದಿಗ್ಭ್ರಮೆಗೊಂಡ ಸರಪಂಚ್!: ಸ್ಥಳೀಯ ಸೌಕರ್ಯಗಳ ನಿರ್ಮಾಣಕ್ಕಾಗಿ ಸರ್ಕಾರದ ಹಣವನ್ನು ಮಂಜೂರು ಮಾಡಲು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳ ಅನುಮತಿ ಅಗತ್ಯ ಇದೆ. ಈ ನಿಟ್ಟಿನಲ್ಲಿ ಜೂನ್ 20ರಂದು ಗ್ರಾಮದ ಸರಪಂಚ್ (ಮುಖ್ಯಸ್ಥರು) ಸಂಬಂಧಪಟ್ಟ ಇಬ್ಬರು ಗ್ರಾಮ ಸೇವಕರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಲು ಕೋರಿದ್ದರು. ಆಗ ಏಳು ಸಾವಿರ ರೂಪಾಯಿ ನಗದು ಮತ್ತು 2 ಬಾಟಲಿ ಮದ್ಯಕ್ಕೆ ಬೇಡಿಕೆ ಇಡಲಾಗಿದೆ. ಇದರಿಂದ ದಿಗ್ಭ್ರಮೆಗೊಂಡ ಸರಪಂಚರು ತಕ್ಷಣವೇ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸರಪಂಚ್ ನೀಡಿದ ದೂರಿನ ನಂತರ ನಮ್ಮ ತಂಡವು ಹಲವಾರು ದಿನಗಳವರೆಗೆ ತಾಳ್ಮೆಯಿಂದ ಕಾದಿತ್ತು. ಸೋಮವಾರ ಸರಿಯಾದ ಕ್ಷಣದಲ್ಲಿ ಬಲೆ ಬೀಸಿ ಇಬ್ಬರು ಗ್ರಾಮ ಸೇವಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಗಿದೆ. ಪುಷ್ಪಾ ಎಂ. ಅಂಬಲ್ಗೆ ಮತ್ತು ಸಿದ್ಧಾರ್ಥ ಕೆ. ಘೋಡ್ಕೆ ಎಂಬುವವರೇ ಬಂಧಿತರು. ಇವರನ್ನು ಕೆಂಪು ಪ್ರೀಮಿಯಂ ಆಮದು ಮಾಡಿದ ಮದ್ಯದ ಎರಡು ದೊಡ್ಡ ಬಾಟಲಿಗಳನ್ನು ಸ್ವೀಕರಿಸುವಾಗ ಬಲೆಗೆ ಹಾಕಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಕಿರಣ್ ಎಂ. ಬಿದ್ವೆ ತಿಳಿಸಿದ್ದಾರೆ.
ಸರಪಂಚರು ಗ್ರಾಮದಲ್ಲಿ ಅಂಡರ್ ಗ್ರೌಂಡ್ ಚರಂಡಿ ಕಾಮಗಾರಿ ಕೈಗೊಂಡಿದ್ದಾರೆ. ಕೂಲಿ, ಸಾಮಗ್ರಿ ಸೇರಿ ಸುಮಾರು 1.48 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಜಿಲ್ಲಾಡಳಿತದ ಅಡಿ ಬರುವ ಸ್ಥಳೀಯ ಬಿಡಿಒ ಅಧಿಕಾರಿಗಳು ಈ ಮೊತ್ತವನ್ನು ಮರು ಪಾವತಿಸಬೇಕು. ಇದಕ್ಕಾಗಿ ಇಬ್ಬರು ಗ್ರಾಮ ಸೇವಕರು ನಗದು ಪಾವತಿ ಜೊತೆಗೆ ಮದ್ಯಕ್ಕೂ ಬೇಡಿಕೆ ಇಟ್ಟಿದ್ದರು ಎಂದು ತನಿಖೆಯಲ್ಲಿ ಖಚಿತವಾಗಿದೆ ಎಂದು ಡಿವೈಎಸ್ಪಿ ಮಾಹಿತಿ ನೀಡಿದ್ದಾರೆ.
ಲಂಚದ ರೇಟ್ ಕಾರ್ಡ್!: ಈ ಭ್ರಷ್ಟ ಗ್ರಾಮ ಸೇವಕರು ಲಂಚದ ರೇಟ್ ಕಾರ್ಡ್ ಸಹ ಹೊಂದಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ. ಆರೋಪಿ ಪುಷ್ಪಾ ಅಂಬಲ್ಗೆ ಒಂದು ಲಕ್ಷಕ್ಕಿಂದ ಹೆಚ್ಚಿನ ಮೊತ್ತದ ಅನುದಾನ ಮಂಜೂರು ಮಾಡಲು ಶೇ.10-11ರಷ್ಟು ಎಂದರೆ ಅಥವಾ ಸುಮಾರು 11,000 ರೂ. ಕಿಕ್ಬ್ಯಾಕ್ಗೆ ಬೇಡಿಕೆಗೆ ಇಟ್ಟಿದ್ದರು. ಒಂದು ವೇಳೆ ಪೂರ್ಣ ಮೊತ್ತವನ್ನು ಕೊಡಲು ಸಾಧ್ಯವಾಗದಿದ್ದರೆ, ಕಡತಗಳನ್ನು ಇಲಾಖೆಯ ಟೇಬಲ್ನಿಂದ ಟೇಬಲ್ಗೆ ತೆರಳಲು ಉನ್ನತ ಅಧಿಕಾರಿಗಳಿಗೆ ಡೌನ್ ಪೇಮೆಂಟ್ ಆಗಿ ಬ್ಲ್ಯಾಕ್ ಡಾಗ್ ಸ್ಕಾಚ್ ವಿಸ್ಕಿಯ ಎರಡು ಬಾಟಲಿಗಳನ್ನು ಕೊಡಬೇಕಾಗುತ್ತದೆ ಎಂದು ಸರಪಂಚ್ ತಮ್ಮ ದೂರಿನಲ್ಲಿ ವಿವರಿಸಿದ್ದರು.
ಈ ವಿಚಿತ್ರ ಬೇಡಿಕೆಯನ್ನು ಪೂರೈಸಲು ದೂರುದಾರರು ಹಿಂಜರಿದಾಗ ಮದ್ಯದ ಮೊತ್ತವನ್ನು ಒಟ್ಟು ಲಂಚದಿಂದ ಕಡಿತಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಅಲ್ಲದೇ, ಲಂಚದ ಹಣ ಹೇಗೆ ಹಂಚಿಕೆಯಾಗುತ್ತದೆ ಎಂಬುವುದನ್ನೂ ಮಹಿಳಾ ಅಧಿಕಾರಿಯು ಸರಪಂಚ್ ಬಳಿ ಹೇಳಿಕೊಂಡಿದ್ದರು.
ಸಾಮಾನ್ಯವಾಗಿ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಕಾಮಗಾರಿ ಮೊತ್ತವನ್ನು ಮಂಜೂರು ಮಾಡಲು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ಶೇ.4-5ರಷ್ಟು ಲಂಚ ಸಿಗುತ್ತದೆ. ಕೆಳಗಿನ ಅಧಿಕಾರಿಗಳು ತಮ್ಮ ಪಾಲನ್ನು ಶೇ.1.5ರಿಂದ 2ರಷ್ಟು ತೆಗೆದುಕೊಳ್ಳುತ್ತಾರೆ. ನಂತರ ಗುಮಾಸ್ತರು ಮತ್ತು ಪ್ಯೂನ್‌ಗಳಿಗೆ ಶೇ.5ರಷ್ಟು ನೀಡಬೇಕಾಗುತ್ತದೆ ಎಂದು ಅಧಿಕಾರಿಣಿ ಬಹಿರಂಗ ಪಡಿಸಿದ್ದರು. ಈ ಲಂಚ ಪ್ರಕರಣದಲ್ಲಿ ಹಣದೊಂದಿಗೆ ವಿದೇಶಿ ಮದ್ಯದ ಬೇಡಿಕೆಯು ಎಸಿಬಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದೆ ಎಂದು ಡಿವೈಎಸ್ಪಿ ಬಿದ್ವೆ ನಗುತ್ತಲೇ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:Digital Bribery: ಫೋನ್ ಪೇ, ಗೂಗಲ್ ಪೇ ಮೂಲಕ ಲಂಚ.. ಭ್ರಷ್ಟಾಚಾರ ನಿಗ್ರಹ ಇಲಾಖೆಗೆ ತಲೆನೋವಾದ ಡಿಜಿಟಲ್ ಲಂಚ ಪ್ರಕರಣಗಳು..