ಮಧುರೈ:ಫ್ರೀ ಫೈರ್ ಆನ್ಲೈನ್ ಗೇಮ್ ಮೂಲಕ ಅಪ್ರಾಪ್ತೆ ಪರಿಚಯ ಬೆಳೆಸಿಕೊಂಡ ಯುವಕ, ಆಕೆಯನ್ನು ಮದುವೆ ಮಾಡಿಕೊಳ್ಳುವ ನೆಪದಲ್ಲಿ ಗೌಪ್ಯವಾಗಿ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದ. ಇತ್ತ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 7 ತಿಂಗಳ ಬಳಿಕ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಿವಾಸಿ ಸೆಲ್ವ (22) ಬಂಧಿತ ಆರೋಪಿ. ತಮಿಳುನಾಡಿನ ಮಧುರೈ ಮೂಲದ ಅಪ್ರಾಪ್ತೆಯನ್ನು ಫ್ರೀ ಫೈರ್ ಆನ್ಲೈನ್ ಗೇಮ್ ಮೂಲಕ ಪರಿಚಯ ಬೆಳೆಸಿಕೊಂಡಿದ್ದ. ಬಳಿಕ 2021 ರ ಡಿಸೆಂಬರ್ 20 ರಂದು ವಿವಾಹವಾಗುವುದಾಗಿ ನಂಬಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದ.
ಇತ್ತ ಬಾಲಕಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರು ಬಾಲಕಿಯ ಮೊಬೈಲ್ ಟವರ್ ಮೂಲಕ ಬಾಲಕಿಯನ್ನು ಪುಣೆಯಲ್ಲಿ ಪತ್ತೆ ಮಾಡಿದ್ದರು. ಏಪ್ರಿಲ್ 4 ರಂದು ಅವಳನ್ನು ತಮಿಳುನಾಡಿಗೆ ವಾಪಸ್ ಕರೆತರಲಾಗಿತ್ತು.