ಥಾಣೆ (ಮಹಾರಾಷ್ಟ್ರ) :ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಪೂರ್ವದಲ್ಲಿ ಶುಕ್ರವಾರ ಶಿಥಿಲಗೊಂಡಿದ್ದ ಕಟ್ಟಡ ಕುಸಿದು, ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಐರೆ ಗ್ರಾಮದಲ್ಲಿರುವ 'ಆದಿನಾರಾಯಣ ಭವನ್' ಕಟ್ಟಡವು 44 ವಠಾರಗಳನ್ನು ಹೊಂದಿದ್ದು, ಕಟ್ಟಡದ ಕೆಲವು ಭಾಗಗಳು ಮುಳುಗಲು ಪ್ರಾರಂಭಿಸಿದ ಬಳಿಕ ಅಲ್ಲಿದ್ದ ನಿವಾಸಿಗಳನ್ನು ತೆರವು ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ಕಟ್ಟಡ ಕುಸಿದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ರಾತ್ರಿ 8 ಗಂಟೆ ಸುಮಾರಿಗೆ ಸುನಿಲ್ ಬಿರ್ಜಾ ಲೋಡಯಾ (55) ಅವರ ದೇಹವನ್ನು ಅವಶೇಷಗಳ ಅಡಿಯಿಂದ ಮೇಲೆ ತರಲು ಯಶಸ್ವಿಯಾಗಿತ್ತು. ರಾತ್ರಿ 9:15ರ ಸುಮಾರಿಗೆ ಅವಶೇಷಗಳ ಅಡಿ ಸಿಲುಕಿದ್ದ 54 ವರ್ಷದ ದೀಪ್ತಿ ಸುನಿಲ್ ಲೋಡಾಯಾ ಎಂಬುವವರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಟಿಎಂಸಿ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಮಾಹಿತಿ ನೀಡಿದ್ದಾರೆ.
ನಂತರ, ಅವಶೇಷಗಳಿಂದ ಮತ್ತೊಂದು ಶವವನ್ನು ಹೊರ ತೆಗೆಯಲಾಗಿದ್ದು, ಅವರನ್ನ ಅರವಿಂದ್ ಭಟ್ಕರ್ (70) ಎಂದು ಗುರುತಿಸಲಾಗಿದೆ. ಇನ್ನೂ ಒಬ್ಬರು ಸಿಕ್ಕಿಬಿದ್ದಿರುವ ಶಂಕೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಯಾಸಿನ್ ತದ್ವಿ ತಿಳಿಸಿದ್ದಾರೆ.