ಮುಂಬೈ(ಮಹಾರಾಷ್ಟ್ರ):ರಾಜ್ಯ ಸರ್ಕಾರದೊಂದಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಟಿಸಿ) ವಿಲೀನ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಸಾರಿಗೆ ನೌಕರರು ಎನ್ಸಿಪಿ ವರಿಷ್ಠ ಶರದ್ ಪವಾರ್ ಮನೆ ಮೇಲೆ ಕಲ್ಲು ಮತ್ತು ಶೂಗಳ ತೂರಾಟ ನಡೆಸಿದ್ದಾರೆ. ಇದರಿಂದ ಪವಾರ್ ನಿವಾಸಕ್ಕೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಸಾರಿಗೆ ನಿಗಮ ವಿಲೀನ ಮಾಡಬೇಕೆಂದು ಕಳೆದ ಐದು ತಿಂಗಳಿಂದ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಶುಕ್ರವಾರ ನಡೆಸುತ್ತಿದ್ದ ಪ್ರತಿಭಟನೆಯು ಭುಗಿಲೆದ್ದಿತು. ಆರಂಭದಲ್ಲಿ ನೌಕರರು ಸಣ್ಣ ಗುಂಪಾಗಿ ಶರದ್ ಪವಾರ್ ಮನೆಯತ್ತ ಬಂದಿದ್ದಾರೆ. ನಂತರ ಮನೆ ಸಮೀಪ ಇಟ್ಟಿದ್ದ ಬ್ಯಾರಿಕೇಡ್ಗಳನ್ನು ಕೆಡವಿ ಘೋಷಣೆಗಳನ್ನು ಕೂಗಲು ಶುರು ಮಾಡಿದ್ದಾರೆ. ಇದರಿಂದ ಕ್ಷಣಕಾಲ ಪೊಲೀಸರೇ ದಂಗಾಗಿದ್ದಾರೆ. ಬಳಿಕ ಮಹಿಳೆಯರು ಸೇರಿದಂತೆ ಆಕ್ರೋಶಿತ ನೌಕರರು ಮನೆಯ ಮೇಲೆ ಕಲ್ಲು ಮತ್ತು ಶೂಗಳ ತೂರಾಟ ಮಾಡಿದ್ದಾರೆ.