ಚಂದ್ರಾಪುರ (ಮಹಾರಾಷ್ಟ್ರ):ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ಚಂದ್ರಾಪುರದ ಕಾಡುಗಳಲ್ಲಿ ಬೆಳೆಯುವ ತೇಗದ ಮರವನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಭವ್ಯವಾದ ರಾಮಮಂದಿರ ಸಾವಿರ ವರ್ಷಗಳ ಕಾಲ ರಚನಾತ್ಮಕವಾಗಿ ಗಟ್ಟಿಮುಟ್ಟಾಗಿ ಉಳಿಯುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಚಂದ್ರಾಪುರ ಜಿಲ್ಲೆಯ ಅರಣ್ಯಗಳಿಂದ ತೇಗದ ಮರವನ್ನು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (FDCM) ಮೂಲಕ ಒದಗಿಸಲಾಗುತ್ತಿದೆ. ಮೊದಲ ರವಾನೆ ಮಾರ್ಚ್ 29 ರಂದು ಭವ್ಯವಾದ ಶೋಭಾ ಯಾತ್ರೆ ಮೂಲಕ ಸಾಗಲಿದೆ.
ದೇವಸ್ಥಾನಕ್ಕೆ 1800 ಕ್ಯೂಬಿಕ್ ಮೀಟರ್ ಮರದ ಅಗತ್ಯವಿದೆ. ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಮರವನ್ನು ಪೂರೈಸಲು ಬೇಕಾದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದೆ. ನಾಳೆ 1800 ಕ್ಯೂಬಿಕ್ ಮೀಟರ್ ಮರದ ಮೊದಲ ರವಾನೆಯು ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ. ಅಯೋಧ್ಯೆಗೆ ಹೋಗುವ ಮಾರ್ಗದಲ್ಲಿ ಅನೇಕ ಸ್ಥಳಗಳಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಾರೆ ಎಂದು ಸಂಸ್ಕೃತಿ ಮತ್ತು ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.
ವೇಳಾಪಟ್ಟಿ ಹೀಗಿದೆ..: ಮೊದಲ ರವಾನೆ ಮಾ.29 ರಂದು ಎಫ್‌ಡಿಸಿಎಂ ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ. ಕಳಿಸಿದ ಮರದ ಬೆಲೆ 1.32 ಕೋಟಿ ರೂ ಎನ್ನಲಾಗಿದೆ. ಮೊದಲು ಚಂದ್ರಾಪುರದ ಮಾತಾ ಮಹಾಕಾಳಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಡಲಿದೆ. ಮಾರ್ಗಮಧ್ಯೆ ಹಲವೆಡೆ ಮರದ ಪೂಜೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಬಲ್ಲಾರಾಪುರದ ಅಲ್ಲಪಲ್ಲಿ ರಸ್ತೆಯಲ್ಲಿ ಅರಣ್ಯ ಪ್ರವೇಶ ದ್ವಾರದಿಂದ ಮೆರವಣಿಗೆ ಆರಂಭವಾಗಲಿದೆ. ಈ ಮೆರವಣಿಗೆಯು ಸಂಜೆ 6 ಗಂಟೆಗೆ ಮಾತಾ ಕಾಳಿ ಮಂದಿರಕ್ಕೆ ತಲುಪಲಿದ್ದು, ಅಲ್ಲಿ ಸರ್ವಧರ್ಮದ ಆರಾಧನೆ ಮತ್ತು ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿದೆ. ರಾತ್ರಿ 9 ಗಂಟೆಗೆ ಚಂದ್ರಾಪುರದ ಚಂದಾ ಕ್ಲಬ್‌ನಲ್ಲಿ ರಾಮ್ ಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಮತ್ತು ಅಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ಕಾರ್ಯಕ್ರಮ ನೀಡುತ್ತಾರೆ. ಈ ಕಾರ್ಯಕ್ರಮಕ್ಕೆ ಹಲವು ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಅಯೋಧ್ಯೆಗೆ ಮರವನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲಿದೆ ಎಂದು ಮುಂಗಂಟಿವಾರ್ ಹೇಳಿದ್ದಾರೆ.
ರಾಮಮಂದಿರವನ್ನು ನಿರ್ಮಿಸುವ ಉದ್ದೇಶಕ್ಕಾಗಿ ರಚಿಸಲಾದ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ಕರಕುಶಲತೆ ಬಗ್ಗೆ ಹೆಚ್ಚು ಗಮನ ನೀಡುತ್ತಿದೆ. ಮಂದಿರ ನಿರ್ಮಾಣಕ್ಕೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗುತ್ತಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಮರಳುಗಲ್ಲು ರಾಜಸ್ಥಾನದಿಂದ ಬಂದಿದ್ದರೆ, ವಿಗ್ರಹಗಳ ನಿರ್ಮಾಣಕ್ಕೆ ಶಾಲಿಗ್ರಾಮ ಶಿಲೆಗಳನ್ನು ನೇಪಾಳದಿಂದ ಆಮದು ಮಾಡಿಕೊಳ್ಳಲಾಗಿದೆ.
ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯನ್ನು ದೇವಾಲಯದ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ಮರವನ್ನು ಎಲ್ಲಿಂದ ಪಡೆಯಬಹುದು ಎಂದು ಕೇಳಿದ್ದರು. ಸಂಶೋಧನೆಯ ನಂತರ, ಸಂಸ್ಥೆಯು ಚಂದ್ರಾಪುರದಲ್ಲಿ ದೊರೆತ ಮರವು ಭಾರತದಲ್ಲಿ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿದೆ. ಬಳಿಕ ಎಂಜಿನಿಯರ್‌ಗಳು ಮತ್ತು ಎಲ್ &ಟಿಯ ಅಧಿಕಾರಿಗಳು ಚಂದ್ರಾಪುರದ ಬಲ್ಲಾರ್‌ಶಾ ಡಿಪೋದಲ್ಲಿ ಇರಿಸಲಾದ ತೇಗದ ಮರದ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ, ರಾಮಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಮರವನ್ನು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ಪೂರೈಸುವ ನಿರ್ಧಾರ ಕೈಗೊಳ್ಳಲಾಯಿತು.