ಮುಂಬೈ:ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಇಂದು ಸಂಜೆ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ಔರಂಗಾಬಾದ್ ನಗರಕ್ಕೆ 'ಸಂಭಾಜಿನಗರ' ಹಾಗು ಒಸ್ಮಾನಾಬಾದ್‌ಗೆ 'ಧಾರಶಿವ್' ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದನೆ ನೀಡಿದೆ. ಇದೇ ವೇಳೆ, ನವಿಮುಂಬೈ ವಿಮಾನ ನಿಲ್ದಾಣದ ಹೆಸರನ್ನು ಡಿ.ಬಿ.ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದ 2 ನಗರಗಳಿಗೆ ಮರುನಾಮಕರಣ: ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿಂದು ಸಂಭಾವ್ಯ ಕೊನೆಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯದ ಎರಡು ನಗರಗಳ ಹೆಸರು ಬದಲಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಮೊಘಲರ ಆಡಳಿತದಲ್ಲಿ ಔರಂಗಜೇಬ್, ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಔರಂಗಾಬಾದ್ ನಗರ ಸ್ಥಾಪನೆ ಮಾಡಿದ್ದರು. ಇದೀಗ ಈ ನಗರವನ್ನು 'ಸಂಭಾಜಿನಗರ' ಎಂದು ಮರುನಾಮಕರಣ ಮಾಡಲಾಗಿದೆ. ಇದೇ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ಉದ್ಧವ್ ಠಾಕ್ರೆ, ಔರಂಗಾಬಾದ್ಗೆ ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವುದಾಗಿ ನನ್ನ ತಂದೆ ಬಾಳಾ ಸಾಹೇಬ್ ಠಾಕ್ರೆಗೆ ನೀಡಿರುವ ಭರವಸೆಯನ್ನು ನಾನು ಮರೆತಿಲ್ಲ ಎಂದು ಹೇಳಿದ್ದರು. ಆ ಭರವಸೆಯಂತೆ ಇದೀಗ ನಿರ್ಧಾರ ಕೈಗೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ವಿರುದ್ಧ 48 ಶಿವಸೇನೆಯ ಶಾಸಕರು ಬಂಡಾಯವೆದ್ದಿರುವ ಕಾರಣ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿದೆ. ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ.