ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಲೆ ಈಗಾಗಲೇ ಕ್ಷಿಪ್ರವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 60 ಸಾವಿರ ಕೋವಿಡ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಇದೇ ಮೊದಲ ಬಾರಿ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 59,907 ಕೋವಿಡ್ ಕೇಸ್ ದಾಖಲಾಗಿದ್ದು, 322 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 31,73,261 ಕೋವಿಡ್ ಪ್ರಕರಣಗಳಿದ್ದು, ಸದ್ಯ 5,01,559 ಸಕ್ರಿಯ ಪ್ರಕರಣಗಳಿವೆ. ಜತೆಗೆ 56,652 ಜನರು ಇಲ್ಲಿಯವರೆಗೆ ಡೆಡ್ಲಿ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ರಾಜ್ಯದಲ್ಲಿಂದು 30,296 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಉಳಿದಂತೆ ಪುಣೆಯಲ್ಲಿ 11,023 ಕೋವಿಡ್ ಪ್ರಕರಣ, ಮುಂಬೈನಲ್ಲಿ 10,428 ಕೇಸ್, ನಾಗ್ಪುರ್ದಲ್ಲಿ 5,721 ಕೇಸ್ ಹಾಗೂ ಥಾಣೆಯಲ್ಲಿ 3,108 ಹಾಗೂ ಔರಂಗಾಬಾದ್ನಲ್ಲಿ 1,765 ಕೋವಿಡ್ ಕೇಸ್ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿಯಾಗಿದ್ದು, ಮುಂದಿನ ಮೂರು ದಿನಗಳಿಗೆ ಮಾತ್ರ ಆಗುವಷ್ಟು ವ್ಯಾಕ್ಸಿನ್ ಇದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ ತಕ್ಷಣವೇ ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿಕೊಂಡಿದೆ.