ಚಂದ್ರಾಪುರ (ಮಹಾರಾಷ್ಟ್ರ):ಚಾಕೊಲೆಟ್ ತರಲೆಂದು ತನ್ನ ನಾಲ್ಕು ವರ್ಷದ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದ್ದು ಇಡೀ ರಾತ್ರಿ ತಾಯಿಯ ಶವದೊಂದಿಗೆ ಮಗ ಕಳೆದಿದ್ದ ಎಂದು ವರದಿಯಾಗಿದೆ.
ಬಲ್ಲಾರ್‌ಪುರ ತಾಲೂಕಿನ ಬಾಮನಿ ಗ್ರಾಮದ ನಿವಾಸಿ ಸುಷ್ಮಾ ಪವನ್ ಕಾಕಡೆ ಮೃತಪಟ್ಟ ಮಹಿಳೆ. ಈಕೆ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಬುಧವಾರ (ಅಕ್ಟೋಬರ್ 18) ಸಂಜೆ ತನ್ನ ಚಾಕೊಲೆಟ್‌ಗಾಗಿ ಬೇಡಿಕೆ ಇಟ್ಟಿದ್ದರಿಂದ ಸುಷ್ಮಾ ದ್ವಿಚಕ್ರ ವಾಹನದಲ್ಲಿ ಮಗನನ್ನು ಕರೆದುಕೊಂಡು ಪಕ್ಕದ ರಾಜೂರಕ್ಕೆ ಹೋಗಿದ್ದರು. ಆದರೆ, ಈ ಮಾರ್ಗಮಧ್ಯದ ಸೇತುವೆಯಲ್ಲಿ ನಿಯಂತ್ರಣ ತಪ್ಪಿ ತಾಯಿ ಮತ್ತು ಮಗ ಇಬ್ಬರೂ ಸೇತುವೆಯಿಂದ ಕೆಳಗಡೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಕೆಳಗಡೆ ಬಿದ್ದ ಪರಿಣಾಮ ಬೆನ್ನುಮೂಳೆ ಮುರಿದು ಸುಷ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಜತೆಗಿದ್ದ ಮಗ ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಹಿಡಿದುಕೊಂಡು ಅಳುತ್ತಿದ್ದ. ಆದರೆ, ಅವನ ಅಳು ದಾರಿಹೋಕರ ಯಾರ ಕಿವಿಗೂ ಬಿದ್ದಿಲ್ಲ. ಹೀಗಾಗಿ ಇಡೀ ರಾತ್ರಿ ಪುಟ್ಟ ಕಂದ ತನ್ನ ತಾಯಿಯ ಮೃತದೇಹದ ಬಳಿ ಕುಳಿತು ಅಳುತ್ತಿತ್ತು. ಗುರುವಾರ ಬೆಳಗಿನ ಜಾವ ಸ್ಥಳೀಯರ ಗಮನಕ್ಕೆ ಬಂದಿದೆ.
ಈ ಘಟನೆಯ ಬಗ್ಗೆ ಬಲ್ಲಾರ್‌ಪುರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲೇ ತಾಯಿ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ. ಮತ್ತೊಂದೆಡೆ, ಬಾಲಕನನ್ನು ಗ್ರಾಮಾಂತರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಸುಷ್ಮಾ ಮಾನಸಿಕ ಚಿಕಿತ್ಸೆಗಾಗಿ ಔಷಧ ತೆಗೆದುಕೊಳ್ಳುತ್ತಿದ್ದರು. ಆದರೆ, ಗರ್ಭಿಣಿ ಎಂಬ ಕಾರಣಕ್ಕೆ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕದಿಂದ ವೈದ್ಯರು ಔಷಧ ನಿಲ್ಲಿಸುವಂತೆ ಸೂಚಿಸಿದ್ದರು. ಕೆಳಗಡೆ ಬಿದ್ದರೂ ಯಾವುದೇ ರೀತಿಯ ಗಂಭೀರವಾದ ಗಾಯಗಳು ಆಗಿಲ್ಲ ಎಂಬುವುದು ಕೆಲ ಸಂಶಯಗಳಿಗೆ ಕಾರಣವಾಗಿದೆ.
ಬಲ್ಲಾರ್‌ಪುರ ಠಾಣೆ ಇನ್ಸ್‌ಪೆಕ್ಟರ್ ಉಮೇಶ್ ಪಾಟೀಲ್ ಪ್ರತಿಕ್ರಿಯಿಸಿ, ''ಮರಣೋತ್ತರ ಪರೀಕ್ಷೆಯಲ್ಲಿ ಮೃತದೇಹದಲ್ಲಿ ಅಂತಹ ದೊಡ್ಡ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಕೆಳಗಡೆ ಬಿದ್ದಾಗ ತಾಯಿ ಜತೆಗೆ ಬಾಲಕನೂ ಬಿದ್ದಿದ್ದಾನೆ. ಆದರೆ, ಅವನಿಗೆ ಏನೂ ಆಗಲಿಲ್ಲ. ಆದರೆ, ನಾವು ಚಾಕೊಲೆಟ್ ಖರೀದಿಸಲು ರಾತ್ರಿ ಹೊತ್ತು ನಿರ್ಜನ ರಸ್ತೆಗೆ ಹೋಗುವುದರ ಹಿಂದಿನ ನಿಖರವಾದ ಕಾರಣ ಹುಡುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಲಾಗುತ್ತಿದೆ. ಮತ್ತು ಆಕೆ ಪಡೆಯುತ್ತಿದ್ದ ಔಷಧಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:3 ವರ್ಷಗಳ ಹಿಂದೆ ಮಹಿಳೆ ಕೊಲೆ: ಪತಿ, ಅಪಹರಣದ ಕಥೆ ಹೆಣೆದ ಸಹೋದರ ಸೆರೆ