ಮುಂಬೈ :ಎನ್‌ಸಿಪಿಯ ಅಜಿತ್ ಪವಾರ್ ನೇತೃತ್ವದ ಗುಂಪು ಶೀಘ್ರದಲ್ಲೇ ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಿದೆ. ಈ ಕುರಿತು ಮಾಹಿತಿ ನೀಡಿದ ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ, ಅಜಿತ್ ಪವಾರ್ ಅವರು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಳ್ಳಲು ಇಸಿಐ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದರು.
"ಎನ್ಸಿಪಿಯನ್ನು ತಾವು ಪ್ರತಿನಿಧಿಸುವುದಾಗಿ ಅಜಿತ್ ಪವಾರ್ ಹೇಳುವುದಾದರೆ ಅವರು ಇಸಿಐನಿಂದ ಅನುಮೋದನೆ ಪಡೆಯಬೇಕು. ಇದಕ್ಕಾಗಿ ಅವರು ಮೂರು ಹಂತದ ಪ್ರಕ್ರಿಯೆಯನ್ನು ದಾಟಬೇಕಾಗುತ್ತದೆ." ಎಂದು ಕಲ್ಸೆ ಮಾಧ್ಯಮಗಳಿಗೆ ತಿಳಿಸಿದರು. ಆದರೆ ಪಕ್ಷದ ಹೆಸರು ಮತ್ತು ಚಿಹ್ನೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಚುನಾವಣಾ ಆಯೋಗವು ತಮ್ಮ ವಾದವನ್ನು ಆಲಿಸಬೇಕೆಂದು ಶರದ್ ಪವಾರ್ ಬಣ ಈಗಾಗಲೇ ಕೇವಿಯಟ್ ಸಲ್ಲಿಸಿದೆ.
ಪಕ್ಷದ ಬಹುತೇಕ ಶಾಸಕರ ಬೆಂಬಲ ತಮಗಿದೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಎರಡೂ ಬಣಗಳು ಇಂದು ಪ್ರಮುಖ ಸಭೆಗಳನ್ನು ನಡೆಸುತ್ತಿವೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದೆ. ಪ್ರಸ್ತುತ 24 ಶಾಸಕರು ಅಜಿತ್ ಪವಾರ್ ಜೊತೆಗಿದ್ದು, 14 ಶಾಸಕರು ಶರದ್ ಪವಾರ್ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ.
ಮುಂಬೈನಲ್ಲಿ ನಡೆಯುತ್ತಿರುವ ಪ್ರಮುಖ ಸಭೆಗೆ ಹಾಜರಾಗುವಂತೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದರೆ, ಅಜಿತ್ ಪವಾರ್ ಬಣ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಇತರರು ಬಾಂದ್ರಾದಲ್ಲಿ ನಡೆಯುತ್ತಿರುವ ಸಭೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.