ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಬಂಡಾಯ ನಾಯಕ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ನೇತೃತ್ವದಲ್ಲಿ ಎಂಟು ಜನ ಶಾಸಕರು ಭಾನುವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ.
ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜುಲೈ 2ರಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ನೇತೃತ್ವದಲ್ಲಿ ಸುಮಾರು 30 ಶಾಸಕರು ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಅದೇ ದಿನವೇ ಶಿವಸೇನೆ (ಏಕನಾಥ ಶಿಂಧೆ ಬಣ) ಹಾಗೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅಜಿತ್ ಪವಾರ್ ಬೆಂಬಲ ಸೂಚಿಸಿದ್ದರು. ಜೊತೆಗೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಎಂಟು ಜನ ಬೆಂಬಲಿಗ ಶಾಸಕರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದು ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷದ ವಿಭಜನೆಗೂ ಕಾರಣವಾಗಿದೆ.
ಇದೀಗ ದಕ್ಷಿಣ ಮುಂಬೈನ ಯಶವಂತರಾವ್ ಚವಾಣ್ ಸೆಂಟರ್‌ನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಬಣದ ಶಾಸಕರು ಭೇಟಿ ಮಾಡಿರುವುದು ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಅವರೊಂದಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಛಗನ್ ಭುಜಬಲ್, ಹಸನ್ ಮುಶ್ರೀಫ್, ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ತತ್ಕರೆ ಮತ್ತು ಧನಂಜಯ್ ಮುಂಡೆ ಸೇರಿ ಎಲ್ಲ ಎಂಟು ಸಚಿವರು ಸಹ 82 ವರ್ಷದ ಹಿರಿಯ ನಾಯಕ ಪವಾರ್ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಎನ್‌ಸಿಪಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮಹಾ ಸಿಎಂ: ಡಿಸಿಎಂ ಅಜಿತ್ ಪವಾರ್‌ಗೆ ಸಿಕ್ತು ಹಣಕಾಸು ಖಾತೆ!
ಶರದ್ ಭೇಟಿಯ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಪ್ರಫುಲ್ ಪಟೇಲ್, ಇದು ಯೋಜಿತ ಸಭೆಯಲ್ಲ. ಪವಾರ್ ಸಾಹೇಬ್ ಯಶವಂತರಾವ್ ಚವಾಣ್ ಸೆಂಟರ್‌ನಲ್ಲಿದ್ದಾರೆ ಎಂದು ತಿಳಿದಾಗ ಹೊಸದಾಗಿ ನೇಮಕಗೊಂಡ ಎಲ್ಲ ಸಚಿವರು ಇಲ್ಲಿಗೆ ಧಾವಿಸಿದರು. ನಾವೆಲ್ಲರೂ ಗೌರವಾನ್ವಿತ ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ತೆರಳಿದ್ದವು. ನಾವು ಪವಾರ್ ಸಾಹೇಬ್ ಅವರನ್ನು ಎನ್‌ಸಿಪಿ ಒಗ್ಗಟ್ಟಾಗಿರಬೇಕೆಂದು ವಿನಂತಿಸಿದ್ದೇವೆ. ಈ ಬಗ್ಗೆ ಶರದ್ ಪವಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರು ನಮ್ಮ ಮನವಿಯನ್ನು ಆಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಜುಲೈ 14ರಂದು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಎನ್‌ಸಿಪಿ ನಾಯಕರು ಸೇರಿದ ಸುಮಾರು ಎರಡು ವಾರಗಳ ನಂತರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಎಲ್ಲ 9 ಜನ ಎನ್‌ಸಿಪಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಅಜಿತ್ ಪವಾರ್ ಅವರಿಗೆ ಮಹತ್ವದ ಹಣಕಾಸು ಮತ್ತು ಯೋಜನಾ ಖಾತೆಯನ್ನು ನೀಡಲಾಗಿದೆ. ಉಳಿದ ಎನ್‌ಸಿಪಿ ಸಚಿವರು ಪ್ರಮುಖ ಖಾತೆಗಳನ್ನೇ ಪಡೆದಿದ್ದಾರೆ. ಜುಲೈ 18ರಂದು ಅಜಿತ್ ಪವಾರ್ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ, ಅದೇ ದಿನ ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ಹಮ್ಮಿಕೊಳ್ಳಲಾಗಿದೆ. ಈ ಬೆಳವಣಿಗೆಗಳ ನಡುವೆ ಹಿರಿಯ ರಾಜಕಾರಣಿ ಶರದ್ ಪವಾರ್ ಅವರನ್ನು ಎನ್‌ಸಿಪಿ ಬಂಡಾಯದ ನಾಯಕರು ಭೇಟಿ ಮಾಡುವುದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:Opposition partys meeting: ಜು.18 ರಂದು ತಾಜ್ ವೆಸ್ಟೆಂಡ್ನಲ್ಲಿ ವಿಪಕ್ಷಗಳ ಸಭೆ, ಸಿದ್ಧತೆ ವೀಕ್ಷಿಸಿದ ಕಾಂಗ್ರೆಸ್ ನಾಯಕರು