ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ನಡೆದ ಸಚಿವ ಸಂಪುಟದಲ್ಲಿ ಮಹಾ ಆಘಾಡಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 2.5 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದೀರಿ. ನಿಮ್ಮ ಬೆಂಬಲವನ್ನು ಇನ್ನು ಮುಂದೆಯೂ ಕೋರುತ್ತೇನೆ ಎಂದು ಭಾವುಕ ಹೇಳಿಕೆ ನೀಡಿದ್ದಾರೆ. ಇದು ನಾಳೆ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಸರ್ಕಾರ ಪತನದ ಲಕ್ಷಣ ಎಂದೇ ವಿಶ್ಲೇಷಿಸಲಾಗಿದೆ.
ಸಚಿವ ಸಂಪುಟ ಸಭೆ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಸಚಿವರು, "ಸಿಎಂ ಉದ್ಧವ್ ಠಾಕ್ರೆ ಅವರು 3 ಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿದರು. ನಾಳೆ, ವಿಶ್ವಾಸ ಮತ ನಡೆಯುತ್ತದೆ. ಅದು ಸರ್ಕಾರದ ಅಂತ್ಯವೋ ಅಥವಾ ಇಲ್ಲವೋ ಎಂದು ನಾಳೆಯೇ ಗೊತ್ತಾಗಲಿದೆ. ಎಲ್ಲರೂ ಒಗ್ಗೂಡಿ 2.5 ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದೇವೆ. ಇಷ್ಟು ದಿನ ಬೆಂಬಲಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಸಿಎಂ ಹೇಳಿದ್ದಾರೆ" ಎಂದರು.
ಉದ್ಧವ್ ಪರ ಸಚಿವರ ಬ್ಯಾಟಿಂಗ್: "ಉದ್ಧವ್ ಠಾಕ್ರೆ ಅವರಿಗೆ ಯಾವುದೇ ಪೂರ್ವ ಆಡಳಿತದ ಅನುಭವ ಇರಲಿಲ್ಲವಾದರೂ, ಕೊರೊನಾವನ್ನು ಉತ್ತಮವಾಗಿ ನಿಭಾಯಿಸಿದರು. ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮತ್ತೆ ಕೆಲಸಗಳಲ್ಲಿ ತೊಡಗಿಸಿಕೊಂಡರು. ಈ ರೀತಿಯಾಗಿ ಕೆಲಸ ಮಾಡಿದ ಒಬ್ಬ ವ್ಯಕ್ತಿಯ ಹೆಸರನ್ನು ತೋರಿಸಿ" ಎಂದು ಕಾಂಗ್ರೆಸ್ ಮುಖಂಡ, ಸಚಿವ ಸುನೀಲ್ ಕೇದಾರ್ ಸವಾಲು ಹಾಕಿದರು.