ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ 'ರಾಜಕೀಯ ಪಲ್ಲಟ'ವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಸೇರಿದಂತೆ 9 ಶಾಸಕರು ಶಿವಸೇನೆ, ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿದ್ದಾರೆ. ಇದು ಎನ್‌ಸಿಪಿ ನೇತಾರ ಶರದ್ ಪವಾರ್ಗೆ ಭಾರಿ ಶಾಕ್ ನೀಡಿದೆ. ರಾಜ್ಯದಲ್ಲಿ ಶಿವಸೇನೆ ಬಳಿಕ ಮತ್ತೊಂದು ರಾಜಕೀಯ ಪಕ್ಷ ಇಬ್ಭಾಗವಾದಂತಾಗಿದೆ.
ಬಿಜೆಪಿ- ಶಿವಸೇನೆ ಮೈತ್ರಿಕೂಟ ಸೇರಿರುವ ಅಜಿತ್ ಪವಾರ್ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎನ್‌ಸಿಪಿ, ಅವರ ಶಾಸಕತ್ವ ಅನರ್ಹತೆಗೆ ವಿಧಾನಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದೆ. ಇತ್ತ ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಅಜಿತ್ ಪವಾರ್, ನಾವು ಪಕ್ಷ ಬಿಟ್ಟಿಲ್ಲ. ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಪಕ್ಷವೂ ಬೆಂಬಲಿ ನೀಡಲಿದೆ ಎಂದು ಹೇಳಿರೆ. ಇದನ್ನು ಎನ್‌ಸಿಪಿ ಅಲ್ಲಗಳೆದಿದೆ.
ಅನರ್ಹತೆ ತೂಗುಗತ್ತಿ:ಡಿಸಿಎಂ ಅಜಿತ್ ಪವಾರ್ ಸೇರಿದಂತೆ 9 ಮಂದಿ ಶಾಸಕರು ಏಕಾಏಕಿ ಸರ್ಕಾರಕ್ಕೆ ಬೆಂಬಲ ನೀಡಿ ಸಂಪುಟದಲ್ಲಿ ಸ್ಥಾನ ಪಡೆದಿರುವುದು, ಎನ್ಸಿಪಿಗೆ ಪೆಟ್ಟು ಕೊಟ್ಟಿದೆ. ಪಕ್ಷದ ಆಣತಿಯಿಲ್ಲದೇ ಬಿಜೆಪಿ ಸರ್ಕಾರ ಸೇರಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಕೋರಿ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಸಿಪಿ ನಾಯಕ ಜಯಂತ್ ಪಾಟೀಲ್, "ನಾವು ವಿಧಾನಸಭೆಯ ಸ್ಪೀಕರ್‌ಗೆ 9 ಶಾಸಕರನ್ನು ಅನರ್ಹಗೊಳಿಸಲು ಕೋರಿದ್ದೇವೆ. ಅವರೆಲ್ಲರೂ ಪೂರ್ವ ಮಾಹಿತಿ ಇಲ್ಲದೇ ಪಕ್ಷ ತೊರೆದಿದ್ದಾರೆ. ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಬಂಂಡಾಯವೆದ್ದ ಶಾಸಕರು ಮರಳಿ ಪಕ್ಷಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.
ನಾವು ಪಕ್ಷ ತೊರೆದಿಲ್ಲ:ರಾಜ್ಯದ 2ನೇ ಡಿಸಿಎಂ ಆಗಿ ಪ್ರಮಾಣ ಸ್ವೀಕರಿಸಿರುವ ಅಜಿತ್ ಪವಾರ್, "ನಾವು ಪಕ್ಷ ಬಿಟ್ಟಿಲ್ಲ. ಬದಲಾಗಿ ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಇಡೀ ಪಕ್ಷ ಇದನ್ನು ಒಪ್ಪಿಕೊಳ್ಳುತ್ತದೆ. ನಮಗೆ ಎಲ್ಲ ಶಾಸಕರ ಬೆಂಬಲವಿದೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಇನ್ನೂ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಇದು ಗೂಗ್ಲಿಯಲ್ಲ, ದರೋಡೆ:ಅಜಿತ್ ಪವಾರ್ ಸಂಪುಟ ಸೇರಿರುವುದು ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೆ ನುಂಗಲಾರದ ತುತ್ತಾಗಿದೆ. ಅಜಿತ್ ಪವಾರ್ ಅವರ ಗೂಗ್ಲಿ ಬೌಲಿಂಗ್ಗೆ ಶರದ್ ಪವಾರ್ ಹಿಟ್ ವಿಕೆಟ್ ಆಗಿದ್ದಾರೆ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಶರದ್ ಪವಾರ್, "ಇದು ಗೂಗ್ಲಿಯಲ್ಲ, ದರೋಡೆ. ಕೇಂದ್ರ ಸರ್ಕಾರದ ಚಿತಾವಣೆಯಲ್ಲಿ ಇದೆಲ್ಲಾ ನಡೆದಿದೆ. ಪಕ್ಷವನ್ನು ಕಟ್ಟಿ ಬೆಳೆಸುವ ಶಕ್ತಿ ಇದೆ. ಹೊಸ ನಾಯಕತ್ವವನ್ನು ರೂಪಿಸಲಾಗುವುದು" ಎಂದಿದ್ದಾರೆ.
"ಬಿಜೆಪಿ- ಶಿವಸೇನೆ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಎನ್‌ಸಿಪಿಯ ನಿರ್ಧಾರವಲ್ಲ. ಪಕ್ಷದ ರೇಖೆಯನ್ನು ಉಲ್ಲಂಘಿಸಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎನ್‌ಸಿಪಿ ಭ್ರಷ್ಟ ಪಕ್ಷ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದೀಗ ನಮ್ಮ ಪಕ್ಷದ ಶಾಸಕರನ್ನೇ ಸೇರಿಸಿಕೊಂಡಿದ್ದಾರೆ. ಅವರೀಗ ಭ್ರಷ್ಟ ಮುಕ್ತರಾಗಿದ್ದಾರೆ. ಈ ಎಲ್ಲ ಕ್ರೆಡಿಟ್ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ" ಎಂದು ಹೇಳಿದ್ದಾರೆ.
ನೋವಿನ ಸಂಗತಿ:ಅಜಿತ್ ಪವಾರ್ ಮತ್ತು ಇತರ ಎನ್‌ಸಿಪಿ ನಾಯಕರು ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾಗಿರುವುದನ್ನು ಪಕ್ಷದ ಕಾರ್ಯಾಧ್ಯಕ್ಷೆ ಮತ್ತು ಸಂಸದೆ ಸುಪ್ರಿಯಾ ಸುಳೆ ಟೀಕಿಸಿದ್ದಾರೆ. "ಪಕ್ಷವನ್ನು ಭ್ರಷ್ಟ ಎಂದು ಕರೆದ ಬಿಜೆಪಿಯೇ ಅದರ ನಾಯಕರನ್ನು ಸೇರಿಸಿಕೊಂಡಿದೆ. ಅಜಿತ್ ಪವಾರ್ ಅವರ ಬಂಡಾಯ ಮೊದಲಲ್ಲ. ಇದೆಲ್ಲವನ್ನೂ ಮೆಟ್ಟಿನಿಂತು ಪಕ್ಷ ಸಂಘಟನೆ ಮಾಡುವೆ. ಅವರೊಂದಿಗಿನ ನನ್ನ ವೈಯಕ್ತಿಕ ಬಂಧ ಮುಂದುವರಿಯುತ್ತದೆ" ಎಂದು ಹೇಳಿದ್ದಾರೆ.
ಪ್ರಫುಲ್ ಪಟೇಲ್ಗೆ ಕೇಂದ್ರ ಸಚಿವ ಸ್ಥಾನ:ಡಿಸಿಎಂ ಅಜಿತ್ ಪವಾರ್ ಅವರೊಂದಿಗೆ ಗುರುತಿಸಿಕೊಂಡಿರುವ ಸಂಸದ, ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ಸೇರಿಕೊಂಡಿರುವ ಎನ್‌ಸಿಪಿ ಶಾಸಕರ ಪರವಾಗಿ ಪಟೇಲ್ ಕೇಂದ್ರ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಇಂದು ಕೇಂದ್ರ ಸಚಿವ ಸಂಪುಟ ನಡೆಯಲಿದ್ದು, ಪಟೇಲ್ ಸಚಿವರಾಗಲಿದ್ದಾರಾ ಎಂಬುದು ಗೊತ್ತಾಗಲಿದೆ.
ಇದನ್ನೂ ಓದಿ:Maharashtra politics: ಸರ್ಕಾರ ರಚಿಸಲು ಶಿವಸೇನೆ ಜೊತೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಬೇಡ: ಡಿಸಿಎಂ ಪವಾರ್ ಪ್ರಶ್ನೆ